Home Advertisement
Home ನಮ್ಮ ಜಿಲ್ಲೆ ಬೆಂಗಳೂರು ಜ್ಯೋತಿಷಿ ಪ್ರಕರಣ: ಹರಿಪ್ರಸಾದ್ – ಸುರೇಶ್ ಕುಮಾರ್ ನಡುವೆ ವಾಕ್ಸಮರ

ಜ್ಯೋತಿಷಿ ಪ್ರಕರಣ: ಹರಿಪ್ರಸಾದ್ – ಸುರೇಶ್ ಕುಮಾರ್ ನಡುವೆ ವಾಕ್ಸಮರ

0
3

ಬೆಂಗಳೂರು: ಜ್ಯೋತಿಷಿ ಕಮಲಾಕರ್ ಭಟ್ ಅಕ್ರಮ ಸಂಬಂಧ ವಿಚಾರ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಈ ಪ್ರಕರಣ ಮಾಜಿ ಸಚಿವ ಸುರೇಶ್ ಕುಮಾರ್ ಮತ್ತು ಮೇಲ್ಮನೆ ಸದಸ್ಯ ಬಿ.ಕೆ. ಹರಿಪ್ರಸಾದ್ ನಡುವೆ ವಾಕ್ಸಮರಕ್ಕೆ ಸಾಕ್ಷಿಯಾಗಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಸಮಾಜಿಕ ಜಾಲತಾಣದಲ್ಲಿ ಫೋಟೋ ಸಹಿತ ಪೋಸ್ಟ್ ಮಾಡಿರುವ ಹರಿಪ್ರಸಾದ್, ಕಾರವಾರದ ಸಿದ್ದಾಪುರದಲ್ಲಿ ಕಮಲಾಕರ್‌ಭಟ್ ಹೆಸರಿನ ಜ್ಯೋತಿಷಿಯ ಅಕ್ರಮ ಸಂಬಂಧಕ್ಕೆ 41 ವರ್ಷದ ಅಮಾಯಕ ವಸಂತ್ ನಾಯ್ಕ್ ಬಲಿಯಾಗಿದ್ದಾರೆ.

ಈ ಕ್ರಿಮಿನಲ್ ಪ್ರಕರಣ ನ್ಯಾಯಯುತ ತನಿಖೆಯಾಗಿ, ನ್ಯಾಯಾಲಯ ತೀರ್ಪು ಕೊಡುತ್ತದೆ. ಆದರೆ, ಇಂತಹ ಪ್ರಕರಣದಲ್ಲಿ ಸಂಘಪರಿವಾರದ ಹಿನ್ನಲೆಯಿಂದ ಬಂದ ಬಿಜೆಪಿಯ ಸುರೇಶ್ ಕುಮಾರ್, ಬಿ.ವೈ. ವಿಜಯೇಂದ್ರ ಅಂತಹ ಜನಪ್ರತಿನಿಧಿಗಳ ಪಾತ್ರ ಏನು? ಎಂಬುದು ಸ್ವಸ್ಥ ಸಮಾಜ ದೃಷ್ಟಿಯಿಂದ ಮುಖ್ಯವಾಗುತ್ತದೆ ಎಂದಿದ್ದಾರೆ.

ಕೊಲೆ ಆರೋಪಿಗೆ ಶಾಸಕರ ಬೆಂಬಲ ಇಂತಹವರನ್ನು ಓರ್ವ ಶಾಸಕರಾಗಿ ಪ್ರೋತ್ಸಾಹಿಸಿ ಬೆಳೆಸಿದ್ದು ಸಂವಿಧಾನಕ್ಕೆ ಮಾಡುವ ಅಪಚಾರವಲ್ಲವೇ? ಕಮಲಾಕರ ಭಟ್ ಎಂಬ ಜೋತಿಷಿ ಭಾಗಿಯಾದ ಕೊಲೆ ಕೇಸ್‌ನಲ್ಲಿ ರಾಜಾಜಿನಗರ ಶಾಸಕ ಸುರೇಶ್ ಕುಮಾರ್ ಅವರಂತವರ ಪಾತ್ರವಿಲ್ಲವೇ? ಕೊಲೆ ಆರೋಪಿ ಜೋತಿಷಿ `ಗುರೂಜಿ’ ಕಮಲಾಕರ ಭಟ್ಟನನ್ನು ಓರ್ವ ಶಾಸಕನಾಗಿ ಪ್ರೋತ್ಸಾಹಿಸಿ ಬೆಳೆಸಿದ್ದು ಸಂವಿಧಾನಕ್ಕೆ ಮಾಡುವ ಅಪಚಾರವಲ್ಲವೇ? ಓರ್ವ ಮಾಜಿ ಕಾನೂನು ಸಚಿವಗೆ ಇಷ್ಟೂ ಅರಿವಿಲ್ಲದಿರುವುದು ಈ ರಾಜ್ಯದ ದುರಂತವಾಗಿದೆ ಎಂದಿದ್ದಾರೆ.

ರಾಜಕೀಯ ಬಣ್ಣಬೇಡ: ಇದಕ್ಕೆ ಸಾಮಾಜಿಕ ಜಾಲತಾಣದ ಮೂಲಕವೇ ತಿರುಗೇಟು ನೀಡಿರುವ ಸುರೇಶ್ ಕುಮಾರ್, ಕಾರವಾರದ ಸಿದ್ದಾಪುರದಲ್ಲಿ ನಡೆದ ಹೇಯ ಕೃತ್ಯವೊಂದನ್ನು ಮುಂದಿಟ್ಟುಕೊಂಡು, ಅದಕ್ಕೆ ರಾಜಕೀಯ ಬಣ್ಣ ಬಳಿದು, ನನ್ನ ಹೆಸರನ್ನು ತಳುಕು ಹಾಕಲು ನೀವು ನಡೆಸಿರುವ ಪ್ರಯತ್ನ ನಿಮ್ಮ “ಬೌದ್ಧಿಕ ದಿವಾಳಿತನ”ವನ್ನು ಎತ್ತಿ ತೋರಿಸುವಂತಿದೆ. ಸಾರ್ವಜನಿಕ ಜೀವನದಲ್ಲಿರುವ ನಾವು ಸಾವಿರಾರು ಜನರನ್ನು ಭೇಟಿಯಾಗುತ್ತೇವೆ. ಬಹಳ ಹಿಂದೆ ಯಶವಂತಪುರದ ಪೆಟ್ರೋಲ್ ಬಂಕ್ ಬಳಿ ನನ್ನ ಗಾಡಿಗೆ ಇಂಧನ ತುಂಬಿಸುತ್ತಿರುವಾಗ ಈ ವ್ಯಕ್ತಿಯ ಪರಿಚಯವಾಗಿತ್ತು. ನಾನು ಒಮ್ಮೆ ಮಾತ್ರ ಅವರನ್ನು ಭೇಟಿ ಮಾಡಿರುವುದು. ಆದರೆ ಅವರ ಖಾಸಗಿ ಬದುಕಿನ ವಿಕೃತಿಗಳಿಗೆ ಅಥವಾ ಅವರು ಎಸಗುವ ಕ್ರಿಮಿನಲ್ ಕೃತ್ಯಗಳಿಗೆ ನಾನು ಉತ್ತರದಾಯಿಯಾಗುತ್ತೇನೆಯೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.?

ಸಿಎಂ ಜೊತೆ ಕೊಲೆ ಆರೋಪಿ ಸೆಲ್ಫಿ: ವಿಮಾನ ಪ್ರಯಾಣದ ವೇಳೆ ಕಮಲಾಕರ್ ಭಟ್ ಸಿದ್ದರಾಮಯ್ಯರ ಪಕ್ಕದಲ್ಲಿ ಸೆಲ್ಫಿ ಫೋಟೋ ತೆಗೆದುಕೊಳ್ಳುತ್ತಿರುವ ಫೋಟೋವನ್ನು ಶೇರ್ ಮಾಡಿರುವ ಸುರೇಶ್‌ಕುಮಾರ್, ಈ ಫೋಟೋ ಬಗ್ಗೆ ತಮ್ಮ ಅಭಿಪ್ರಾಯ.? ಈ ಕೊಲೆ ಪ್ರಕರಣದಲ್ಲಿ ರಾಜ್ಯದ ಮುಖ್ಯಮಂತ್ರಿಯೂ ಭಾಗಿಯೇ? ಕೊಳೆತ ಮನಸ್ಸಿಗೆ ಕೊಳೆತ ವಿಚಾರಗಳೇ ಬರುವುದು ಅಲ್ಲವೇ ಬಿ.ಕೆ ಹರಿಪ್ರಸಾದ್ ಎಂದು ಪ್ರಶ್ನೆ ಮಾಡಿದ್ದಾರೆ. ನಿಮ್ಮ ಪಕ್ಷದ ನಾಯಕರ ಜೊತೆ ಫೋಟೋ ತೆಗೆಸಿಕೊಂಡವರು, ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡವರು ಜೈಲು ಪಾಲಾದ ಉದಾಹರಣೆಗಳಿಲ್ಲವೇ? ಆಗ ನಿಮ್ಮ ನಾಯಕರುಗಳೆಲ್ಲ ಆ ಅಪರಾಧಗಳ “ನೈತಿಕ ಹೊಣೆ” ಹೊತ್ತಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.

Previous articleಕೊರಿಯನ್ ವಿಡಿಯೋ ಗೇಮ್‌ಗೆ ಮೂವರು ಮಕ್ಕಳು ಆತ್ಮಹತ್ಯೆ