ಮೇಕ್ ಇನ್ ಕರ್ನಾಟಕ : ರನ್‌ವೇ ಸುರಕ್ಷತಾ ವಾಹನ ಉತ್ಪಾದನೆ ಆರಂಭ

0
4

ದೊಡ್ಡಬಳ್ಳಾಪುರ: ‘ಮೇಕ್ ಇನ್ ಕರ್ನಾಟಕ’ ಯೋಜನೆಯಡಿಯಲ್ಲಿ ರಾಜ್ಯದ ಕೈಗಾರಿಕಾ ಕ್ಷೇತ್ರಕ್ಕೆ ಮತ್ತೊಂದು ಮಹತ್ವದ ಸಾಧನೆ ಸೇರ್ಪಡೆಯಾಗಿದೆ. ದೊಡ್ಡಬಳ್ಳಾಪುರ ಸಮೀಪದ ಆದಿನಾರಾಯಣ ಹೊಸಹಳ್ಳಿ ಬಳಿಯ ಕೈಗಾರಿಕಾ ವಲಯದಲ್ಲಿ Anlon Technology Solutions ಸಂಸ್ಥೆಯು ಅಭಿವೃದ್ಧಿಪಡಿಸಿರುವ ರನ್‌ವೇ ಕ್ಲೀನಿಂಗ್ ಮತ್ತು ಸುರಕ್ಷತಾ ವಾಹನದ ಉತ್ಪಾದನೆಗೆ ಅಧಿಕೃತ ಚಾಲನೆ ನೀಡಲಾಗಿದೆ.

ಈ ಅತ್ಯಾಧುನಿಕ ರನ್‌ವೇ ಸುರಕ್ಷತಾ ವಾಹನವನ್ನು ಉದ್ಘಾಟಿಸಿ ಮಾತನಾಡಿದ ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ, “ವಿಮಾನಯಾನ ಹಾಗೂ ನಗರ ಮೂಲಸೌಕರ್ಯ ಕ್ಷೇತ್ರಗಳಿಗೆ ಅತ್ಯಂತ ಅಗತ್ಯವಾದ ಈ ವಿಶೇಷ ಯಂತ್ರಗಳನ್ನು ದೇಶದಲ್ಲೇ ಮೊದಲ ಬಾರಿಗೆ, ದೇಶೀಯವಾಗಿ ಮತ್ತು ವಿಶೇಷವಾಗಿ ಕರ್ನಾಟಕದಲ್ಲೇ ಉತ್ಪಾದಿಸಲಾಗುತ್ತಿದೆ ಎಂಬುದು ಹೆಮ್ಮೆಯ ವಿಷಯ” ಎಂದು ಹೇಳಿದ್ದಾರೆ.

ಇದನ್ನೂ ಓದಿ:  ಬಜೆಟ್ ನಂತರ ಅಧಿಕಾರ ಹಂಚಿಕೆ: ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ

ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಸಚಿವರು, ಸ್ವಿಟ್ಜರ್‌ಲ್ಯಾಂಡ್‌ನ Bucher Municipal ಸಂಸ್ಥೆಯ ಸಹಯೋಗದಲ್ಲಿ ಜಾಗತಿಕ ತಂತ್ರಜ್ಞಾನದೊಂದಿಗೆ ವಿನ್ಯಾಸಗೊಳಿಸಿ ತಯಾರಿಸಲಾದ ಈ ಆಧುನಿಕ ರನ್‌ವೇ ಹಾಗೂ ಮ್ಯುನಿಸಿಪಲ್ ಸ್ವೀಪರ್ ವಾಹನಗಳು ವಿಮಾನ ನಿಲ್ದಾಣಗಳ ರನ್‌ವೇಗಳಲ್ಲಿ ಇರುವ ಲೋಹದ ತುಣುಕುಗಳು, ಸಸ್ಯಸಂಬಂಧಿ ಕಸ ಹಾಗೂ ಸ್ಕಿಡ್‌ಗೆ ಕಾರಣವಾಗುವ ಅಂಶಗಳನ್ನು ಪರಿಣಾಮಕಾರಿಯಾಗಿ ತೆರವುಗೊಳಿಸುವ ಮೂಲಕ ವಿಮಾನಗಳ ಸುರಕ್ಷಿತ ಚಲನವಲನಕ್ಕೆ ಮಹತ್ವದ ಕೊಡುಗೆ ನೀಡಲಿವೆ ಎಂದು ತಿಳಿಸಿದ್ದಾರೆ.

ಇಂತಹ ದೇಶೀಯ ಉತ್ಪಾದನಾ ಪ್ರಯತ್ನಗಳು ಆಮದು ಅವಲಂಬನೆಯನ್ನು ಕಡಿಮೆ ಮಾಡಿ, ವಿದೇಶಿ ವಿನಿಮಯವನ್ನು ಉಳಿಸುವ ಜೊತೆಗೆ, ಭಾರತದ ಆಂತರಿಕ ಎಂಜಿನಿಯರಿಂಗ್ ಹಾಗೂ ತಾಂತ್ರಿಕ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುತ್ತವೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ:  ವೆನೆಜುವೆಲಾ ಆಪರೇಷನ್ ಬಳಿಕ ಭಾರತದ ಮೇಲೆ ಮತ್ತಷ್ಟು ಸುಂಕದ ಸುಳಿವು ನೀಡಿದ ಟ್ರಂಪ್

ನಿಖರ ಎಂಜಿನಿಯರಿಂಗ್ ಮತ್ತು ಮೊಬೈಲಿಟಿ ಕ್ಷೇತ್ರದಲ್ಲಿ ಕರ್ನಾಟಕ ನಿರ್ಮಿಸಿಕೊಂಡಿರುವ ಬಲಿಷ್ಠ ಕೈಗಾರಿಕಾ ಪರಿಸರ ವ್ಯವಸ್ಥೆಯೇ ಇಂತಹ ಉನ್ನತ ಮಟ್ಟದ ತಯಾರಿಕಾ ಯಶಸ್ಸುಗಳಿಗೆ ಆಧಾರವಾಗಿದೆ ಎಂದು ಅವರು ಹೇಳಿದರು.

ಇನ್ನೂ ಕೈಗಾರಿಕಾ ನೀತಿ 2025–30ರ ಅಡಿಯಲ್ಲಿ, ವಿಮಾನಯಾನ ಮತ್ತು ಸಾರ್ವಜನಿಕ ಮೂಲಸೌಕರ್ಯಗಳಂತಹ ಪ್ರಮುಖ ಕ್ಷೇತ್ರಗಳಲ್ಲಿ ಆಮದು ಪರ್ಯಾಯ ಉತ್ಪಾದನೆಗೆ ಮುಂದಾಗುವ ಸಂಸ್ಥೆಗಳಿಗೆ ರಾಜ್ಯ ಸರ್ಕಾರದ ಸಂಪೂರ್ಣ ಬೆಂಬಲ ಮುಂದುವರಿಯಲಿದೆ ಎಂದು ಸಚಿವ ಎಂ.ಬಿ. ಪಾಟೀಲ ಭರವಸೆ ನೀಡಿದ್ದಾರೆ.

Previous articleಬಳ್ಳಾರಿ ಗಲಭೆ ಪ್ರಕರಣ: 26 ಆರೋಪಿಗಳಿಗೆ ನ್ಯಾಯಾಂಗ ಬಂಧನ