ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ರಾಜಘಟ್ಟ ಗ್ರಾಮ ಪಂಚಾಯಿತಿ ತನ್ನದೇ ಆದ ವಿಶಿಷ್ಟ ಪ್ರಯತ್ನದ ಮೂಲಕ ಮಕ್ಕಳಿಗೆ ಮನರಂಜನೆಯ ಜೊತೆಗೆ ಶಿಕ್ಷಣಕ್ಕೂ ಪ್ರೋತ್ಸಾಹ ನೀಡುವ ಉದ್ದೇಶದಿಂದ ಗುಮ್ಮಟಾಕಾರದ ವಿನ್ಯಾಸದ ಅಂಗನವಾಡಿ ಕಟ್ಟಡವನ್ನು ನಿರ್ಮಿಸಿದೆ.
ಈ ಕಟ್ಟಡವು ಗ್ರಾಮ ಪಂಚಾಯಿತಿಯ ಸ್ವಂತ ಸಂಪನ್ಮೂಲಗಳ ಜೊತೆಗೆ ಸಿಎಸ್ಆರ್ (Corporate Social Responsibility) ಅನುದಾನದಿಂದ ನಿರ್ಮಾಣಗೊಂಡಿದ್ದು, ಸಣ್ಣ ಮಕ್ಕಳಿಗೆ ಕಲಿಕೆಯ ಜೊತೆ ಆನಂದದ ವಾತಾವರಣವನ್ನು ಒದಗಿಸಲು ಉದ್ದೇಶಿಸಲಾಗಿದೆ.
ಗುಮ್ಮಟಾಕಾರದ ವಿನ್ಯಾಸದಿಂದಾಗಿ ಈ ಅಂಗನವಾಡಿ ಈಗ ಗ್ರಾಮದಲ್ಲಿನ ಹೊಸ ಆಕರ್ಷಣೆಯ ಕೇಂದ್ರವಾಗಿದೆ. ಒಳಾಂಗಣದ ಬಣ್ಣದ ಚಿತ್ರಗಳು, ಪ್ರಕಾಶಮಾನವಾದ ಬಾಗಿಲು-ಕಿಟಕಿಗಳು ಮತ್ತು ವೃತ್ತಾಕಾರದ ಸ್ಥಳ ವಿನ್ಯಾಸದಿಂದ ಮಕ್ಕಳ ಮನಸ್ಸಿನಲ್ಲಿ ಕುತೂಹಲ ಮೂಡಿಸುವ ರೀತಿಯಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಈ ಹೊಸ ಪ್ರಯತ್ನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂತಸ ವ್ಯಕ್ತಪಡಿಸಿದ್ದು, “ಗ್ರಾಮ ಪಂಚಾಯಿತಿಗಳು ಕ್ರೀಯಾಶೀಲತೆ ಮತ್ತು ಸೃಜನಶೀಲತೆಯನ್ನು ಅಳವಡಿಸಿಕೊಂಡಾಗ, ತಮ್ಮ ಊರಿನ ಅಗತ್ಯತೆಗಳನ್ನು ಅರಿತುಕೊಂಡಾಗ ಇಂತಹ ವಿಶಿಷ್ಟ ಕಾರ್ಯಗಳು ಸಾಧ್ಯವಾಗುತ್ತವೆ” ಎಂದಿದ್ದಾರೆ.
ಗ್ರಾಮ ಪಂಚಾಯಿತಿ ಸದಸ್ಯರು ಸ್ಥಳೀಯರ ಸಹಕಾರದಿಂದ ಈ ಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಈ ಅಂಗನವಾಡಿ ಗ್ರಾಮೀಣ ಪ್ರದೇಶಗಳಲ್ಲೂ ನವೀನ ವಿನ್ಯಾಸ ಮತ್ತು ಸ್ಮಾರ್ಟ್ ಯೋಜನೆಗಳು ಹೇಗೆ ಸಾಧ್ಯ ಎನ್ನುವುದಕ್ಕೆ ಮಾದರಿಯಾಗಿದೆ.
ಈ ನಿರ್ಮಾಣವು ಕೇವಲ ಮಕ್ಕಳಿಗೆ ಕಲಿಕಾ ವಾತಾವರಣವನ್ನು ನೀಡುವುದಲ್ಲದೆ, ಗ್ರಾಮ ಪಂಚಾಯಿತಿಗಳ ಪ್ರಗತಿಪರ ಚಿಂತನೆಗೆ ಒಂದು ಚಿಹ್ನೆಯಂತಾಗಿದೆ.



























