ಬೆಂಗಳೂರು: ಕುಂದಾ ನಗರಿ ಬೆಳಗಾವಿಯ ಜನರ ಬಹುದಿನದ ಬೇಡಿಕೆ ಈಡೇರಿದೆ. ಉದ್ಯಾನ ನಗರಿ ಬೆಂಗಳೂರು ಮತ್ತು ಬೆಳಗಾವಿ ನಡುವಿನ ವಂದೇ ಭಾರತ್ ರೈಲು ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 10ರಂದು ಚಾಲನೆ ನೀಡಲಿದ್ದಾರೆ. ಈ ಮೂಲಕ ಉಭಯ ನಗರದ ನಡುವಿನ ಸಂಚಾರಕ್ಕೆ ಪ್ರಯಾಣಿಕರಿಗೆ ಸಹಾಯಕವಾಗಲಿದೆ.
ಈ ಕುರಿತು ಮಾತನಾಡಿರುವ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್, “ಬೆಳಗಾವಿ – ಬೆಂಗಳೂರು ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭವಾಗಬೇಕೆಂಬುದು ಬೆಳಗಾವಿ ಜನರ ಬಹುದಿನಗಳ ಕನಸು, ನಾನು ಬೆಳಗಾವಿ ಸಂಸದನಾದ ನಂತರ ಅಲ್ಲಿನ ವ್ಯಾಪಾರಸ್ಥರು, ಉದ್ಯಮಿಗಳು, ನಾಗರಿಕರು ಈ ಕುರಿತು ನನಗೆ ಒತ್ತಾಯಿಸುತ್ತಿದ್ದರು” ಎಂದು ಹೇಳಿದ್ದಾರೆ.
“ಹೊಸ ವಂದೇ ಭಾರತ್ ರೈಲು ಸಂಚಾರಕ್ಕೆ ಸತತ ಪ್ರಯತ್ನ ನಡೆಯುತ್ತಿತ್ತು. ಬೆಳಗಾವಿ – ಬೆಂಗಳೂರು ವಂದೇ ಭಾರತ್ ರೈಲಿಗೆ ಚಾಲನೆ ನೀಡುವಂತೆ ಪ್ರಧಾನಿಗಳನ್ನು ವಿನಂತಿಸಿದ್ದು, ಪ್ರಧಾನಿಗಳು ಮನವಿಗೆ ಸ್ಪಂದಿಸಿ, ತ್ವರಿತವಾಗಿ ರೈಲ್ವೆ ಇಲಾಖೆಗೆ ನಿರ್ದೇಶನ ನೀಡಿ, ಆಗಸ್ಟ್ 10ರ ಬೆಂಗಳೂರು ಕಾರ್ಯಕ್ರಮದಲ್ಲಿಯೇ ರೈಲು ಸಂಚಾರಕ್ಕೆ ಸಹ ಹಸಿರು ನಿಶಾನೆ ತೋರಿಸಲಿದ್ದಾರೆ” ಎಂದು ಶೆಟ್ಟರ್ ತಿಳಿಸಿದ್ದಾರೆ.
ಇದು ಕರ್ನಾಟಕದ 11ನೇ ವಂದೇ ಭಾರತ್ ರೈಲಾಗಿದೆ ಎಂದು ನೈಋತ್ಯ ರೈಲ್ವೆ ಹೇಳಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ರೈಲಿನ ವೇಳಾಪಟ್ಟಿ, ನಿಲ್ದಾಣಗಳ ಮಾಹಿತಿಯನ್ನು ರೈಲ್ವೆ ಇಲಾಖೆ ಬಿಡುಗಡೆ ಮಾಡಿದೆ. ಆದರೆ ರೈಲಿನ ಪ್ರಯಾಣ ದರದ ಮಾಹಿತಿಯನ್ನು ಇನ್ನೂ ನೀಡಿಲ್ಲ.
ನಿಲ್ದಾಣಗಳು ವೇಳಾಪಟ್ಟಿ: ಬೆಳಗಾವಿ-ಕೆಎಸ್ಆರ್ ಬೆಂಗಳೂರು ನಡುವೆ ರೈಲು ಸಂಖ್ಯೆ 26751 ಸಂಚಾರವನ್ನು ನಡೆಸಲಿದೆ. ಕೆಎಸ್ಆರ್ ಬೆಂಗಳೂರು ಬೆಳಗಾವಿ ನಡುವೆ ರೈಲು ಸಂಖ್ಯೆ 26752 ಸಂಚಾರವನ್ನು ನಡೆಸಲಿದೆ. ವಾರದ 6 ದಿನ (ಬುಧವಾರ ಸಂಚಾರವಿಲ್ಲ) ರೈಲು ಸಂಚರಿಸಲಿದೆ. ಈ ರೈಲಿನ ನಿರ್ವಹಣೆ ಬೆಳಗಾವಿಯಲ್ಲಿ ಆಗಲಿದೆ.
ಕೆಎಸ್ಆರ್ ಬೆಂಗಳೂರು (ಮೆಜೆಸ್ಟಿಕ್) ನಿಲ್ದಾಣದಿಂದ ಹೊರಡುವ ರೈಲು ಯಶವಂತಪುರ, ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಧಾರವಾಡದಲ್ಲಿ ನಿಲುಗಡೆಯನ್ನು ಹೊಂದಿದೆ.
ಬೆಳಗಾವಿ-ಕೆಎಸ್ಆರ್ ಬೆಂಗಳೂರು ರೈಲು ಸಂಖ್ಯೆ 26751 ಬೆಳಗಾವಿಯಿಂದ 5.20ಕ್ಕೆ ಹೊರಟು 7.08/ 7.10 ಧಾರವಾಡ, 7.30/ 7.35 ಹುಬ್ಬಳ್ಳಿ, 8.35/ 8.37 ಹಾವೇರಿ, 9.25/ 9.27 ದಾವಣಗೆರೆ, 12.15/ 12.17 ತುಮಕೂರು ಮತ್ತು 13.03/ 13.05 ಯಶವಂತಪುರ ಹಾಗೂ 13.50 ಕೆಎಸ್ಆರ್ ಬೆಂಗಳೂರು.
ಕೆಎಸ್ಆರ್ ಬೆಂಗಳೂರು-ಬೆಳಗಾವಿ ನಡುವಿನ ರೈಲು ಸಂಖ್ಯೆ 26752 ಕೆಎಸ್ಆರ್ ಬೆಂಗಳೂರು 14.20. ಯಶವಂತಪುರ 14.28/ 14.30, ತುಮಕೂರು 15.03/ 15.05, ದಾವಣಗೆರೆ 17.48/ 17.50, ಹಾವೇರಿ 18.48/ 18.50, ಹುಬ್ಬಳ್ಳಿ 20/20.05, ಧಾರವಾಡ 20.25/ 20.27 ಮತ್ತು ಬೆಳಗಾವಿ 22.40.
ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ವಂದೇ ಭಾರತ್ ರೈಲು ಈಗಾಗಲೇ ಸಂಚಾರವನ್ನು ನಡೆಸುತ್ತಿದೆ. ಈ ರೈಲು ಸೇವೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಈಗ ಬೆಂಗಳೂರು-ಬೆಳಗಾವಿ ನಡುವೆ ಹೊಸ ವಂದೇ ಭಾರತ್ ರೈಲು ಓಡಿಸಲಾಗುತ್ತಿದೆ.
ಚೇರ್ ಕಾರ್, ಎಕ್ಸಿಕ್ಯುಟಿವ್ ಕ್ಲಾಸ್ ಎಂದು ವಂದೇ ಭಾರತ್ ರೈಲಿನಲ್ಲಿ ಎರಡು ಮಾದರಿ ಬೋಗಿ ಇರುತ್ತದೆ. ಇವುಗಳ ದರಗಳು ವಿಭಿನ್ನವಾಗಿರುತ್ತದೆ. ಸೀಮಿತ ನಿಲುಗಡೆ ವೇಗವಾಗಿ ರೈಲು ಸಂಚಾರ ನಡೆಸುವುದರಿಂದ ಜನರಿಗೆ ಸಮಯ ಉಳಿತಾಯವಾಗಲಿದೆ.