ಬಳ್ಳಾರಿ: ಬ್ಯಾನರ್ ಘರ್ಷಣೆಯಲ್ಲಿ ಖಾಸಗಿ ಅಂಗರಕ್ಷಕರ ಬಂದೂಕುಗಳಿಂದ ಶಾಸಕ ಜಿ. ಜನಾರ್ದನ ರೆಡ್ಡಿ ಮನೆ ಮೇಲೆ ಐವತ್ತಕ್ಕೂ ಅಧಿಕ ಬುಲೆಟ್ ಹಾರಿಸಿ ಗುಂಡಿನ ಮಳೆಯನ್ನೇ ಸುರಿಸಲಾಗಿದೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಆರೋಪಿಸಿದರು.
ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಾರ್ದನ ರೆಡ್ಡಿ ಮೇಲಿನ ದ್ವೇಷದಿಂದಲೇ ಶಾಸಕ ನಾರಾ ಭರತರೆಡ್ಡಿ ಕಡೆಯವರು ಬಂದಿದ್ದಾರೆ. ಎಲ್ಲವನ್ನೂ ನೋಡಿದರೆ ರೆಡ್ಡಿ ಮುಗಿಸುವ ಸಂಚು ನಡೆದಿದೆ ಎನ್ನುವ ಅನುಮಾನ ಮೂಡುತ್ತಿದೆ ಎಂದು ಆರೋಪಿಸಿದರು. ಈಗಾಗಲೆ ಬಂಧಿಸಿರುವ ಖಾಸಗಿ ಅಂಗರಕ್ಷಕ, ಕೊಲೆ ಆರೋಪಿ ಗುರುಚರಣ್ ಸಿಂಗ್ ಯಾರಿಗೆ ಅಂಗರಕ್ಷಕನಾಗಿದ್ದ? ಎಂಬುದನ್ನು ಪೊಲೀಸರು ಖಚಿತಪಡಿಸಬೇಕು. ಘರ್ಷಣೆಗೆ ಪ್ರಚೋದನೆ ನೀಡಿದ ಪ್ರಮುಖ ಆರೋಪಿಗಳನ್ನೂ ಬಂಧಿಸಬೇಕು. ಯಾರ ಒತ್ತಡಕ್ಕೂ ಮಣಿಯದೇ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಬಳ್ಳಾರಿ ಗಲಭೆ ಪ್ರಕರಣ: FSL ತಂಡಕ್ಕೆ ಮತ್ತೊಂದು ಬುಲೆಟ್ ಪತ್ತೆ
ಘಟನೆಗೆ ಕಾರಣರಾದ ಎಲ್ಲ ಆರೋಪಿಗಳಿಗೂ ಶಿಕ್ಷೆ ಆಗಬೇಕು. ಇಲ್ಲವಾದರೆ ಬಳ್ಳಾರಿಯಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಮಾಡುವೆ. ಮುಂದಿನ ಹೋರಾಟದ ಬಗ್ಗೆ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.























