ಬಳ್ಳಾರಿ: ಬಳ್ಳಾರಿಯಲ್ಲಿ ನಡೆದ ಗಲಾಟೆ ಮತ್ತು ಗುಂಡೇಟು ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಬುಧವಾರ ತೀವ್ರ ಆರೋಪಗಳನ್ನು ಮಾಡಿದ್ದು, ಶಾಸಕರಾದ ಭರತ್ ರೆಡ್ಡಿ, ಸತೀಶ್ ರೆಡ್ಡಿ ಹಾಗೂ ಪೊಲೀಸ್ ಕಾರ್ಯವೈಖರಿಯ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ.
ಅರಸು ಅವರನ್ನು ಸಿದ್ದರಾಮಯ್ಯ ಅವರಿಗೆ ಹೋಲಿಸುವುದು ಸೂಕ್ತವಲ್ಲ: ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀರಾಮುಲು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತಾವಧಿ ಕುರಿತು ಪ್ರತಿಕ್ರಿಯಿಸುತ್ತಾ, “ದಿವಂಗತ ದೇವರಾಜ ಅರಸು ಅವರ ದಾಖಲೆಯನ್ನು ಸಿದ್ದರಾಮಯ್ಯ ಮುರಿದಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಆದರೆ ದೇವರಾಜ ಅರಸು ಅವರನ್ನು ಸಿದ್ದರಾಮಯ್ಯ ಅವರಿಗೆ ಹೋಲಿಸುವುದು ಸೂಕ್ತವಲ್ಲ. ಅದು ಆಕಾಶಕ್ಕೆ ಭೂಮಿಗೆ ಹೋಲಿಸಿದಂತೆ” ಎಂದು ಹೇಳಿದರು. ಈ ಹಿಂದೆ 2006ರಲ್ಲಿ ಸಿದ್ದರಾಮಯ್ಯ ಅವರಿಗೆ ಬೆಂಬಲ ನೀಡಿದ್ದೆವು ಎಂದು ಅವರು ನೆನಪಿಸಿದರು.
ಇದನ್ನೂ ಓದಿ: ಬಳ್ಳಾರಿ ಬ್ಯಾನರ್ ಗಲಾಟೆ : ನಾರಾ ಭರತ್ ರೆಡ್ಡಿ V/S ಜನಾರ್ದನ ರೆಡ್ಡಿ ಸಮರ CBI ತನಿಖೆಗೆ ಆಗ್ರಹ
ಗುಂಡೇಟು ಪ್ರಕರಣದ ವಿವರ ನೀಡಿದ ಶ್ರೀರಾಮುಲು: ಬಳ್ಳಾರಿಯಲ್ಲಿ ನಡೆದ ಘಟನೆಯ ಕುರಿತು ಮಾತನಾಡಿದ ಶ್ರೀರಾಮುಲು, “ಭರತ್ ರೆಡ್ಡಿಯ ಕಣ್ಣೆದುರೇ ರಾಜಶೇಖರ ಅವರಿಗೆ ಗುಂಡೇಟು ಬಿದ್ದಿದೆ. ಕೇವಲ 4–5 ಅಡಿ ಅಂತರದಲ್ಲಿ ಈ ಘಟನೆ ನಡೆದಿದೆ. ಭರತ್ ರೆಡ್ಡಿ ಜೊತೆ ಗನ್‌ಮ್ಯಾನ್‌ಗಳು ಬಂದಿದ್ದರು” ಎಂದು ಆರೋಪಿಸಿದರು.
“ರಾತ್ರಿ 9 ಗಂಟೆ ಸುಮಾರಿಗೆ ರಾಜಶೇಖರ ನಮ್ಮ ಮನೆಗೆ ಬಾಟಲ್ ಎಸೆದ. ಈ ವೇಳೆ ಪೊಲೀಸರು ರಾಜಶೇಖರಗೆ ಲಾಠಿ ಏಟು ನೀಡಿದರು. ಆಗ ಆತ ವಾಪಸ್ ಓಡಿ ಹೋಗಲು ಯತ್ನಿಸಿದ. ಅದೇ ಸಮಯದಲ್ಲಿ ಭರತ್ ರೆಡ್ಡಿಯ ಗನ್‌ಮ್ಯಾನ್ ರಾಜಶೇಖರಗೆ ಗುಂಡೇಟು ಹಾರಿಸಿದ್ದಾರೆ” ಎಂದು ಶ್ರೀರಾಮುಲು ಹೇಳಿದರು.
ಈ ಫೈರಿಂಗ್ ಉದ್ದೇಶಪೂರ್ವಕವಾಗಿಯೇ ನಡೆದಿದೆ ಎಂದು ಆರೋಪಿಸಿದ ಅವರು, “ಭರತ್ ರೆಡ್ಡಿ ತಾವೇ ಫೈರಿಂಗ್ ಮಾಡಿಸಿದ್ದಾರೆ. ಈ ಗನ್‌ಮ್ಯಾನ್‌ಗಳಿಗೆ ರಾಜಶೇಖರ ಚಿರಪರಿಚಿತ. ರಾಜಶೇಖರ ನಿತ್ಯ ಭರತ್ ರೆಡ್ಡಿ ಜೊತೆಯಲ್ಲೇ ಇರುತ್ತಿದ್ದ. ಆತ ವಾಪಸ್ ಹೋಗುವಾಗ ಹಿಂದುರುಗಿ ಶೂಟ್ ಮಾಡಲಾಗಿದೆ” ಎಂದು ವಿವರಿಸಿದರು.
ಆದರೆ, “ಈ ಪ್ರಕರಣದಲ್ಲಿ ಜನಾರ್ಧನ ರೆಡ್ಡಿ ನನ್ನನ್ನು ಸಿಲುಕಿಸಲು ಯತ್ನ ನಡೆಸಿದ್ದಾರೆ” ಎಂದು ಶ್ರೀರಾಮುಲು ಆರೋಪಿಸಿದರು.
ಇದನ್ನೂ ಓದಿ: ಬಳ್ಳಾರಿ: ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ
ಬಂಧನ ಯಾಕಿಲ್ಲ? – ಸರ್ಕಾರದ ವಿರುದ್ಧ ಪ್ರಶ್ನೆ: “ಎಲ್ಲಾ ವೀಡಿಯೋಗಳು ಬಯಲಾಗಿದ್ದರೂ ಸಹ ಭರತ್ ರೆಡ್ಡಿಯನ್ನು ಇನ್ನೂ ಬಂಧಿಸಿಲ್ಲ ಯಾಕೆ? ತಪ್ಪು ಮಾಡಿರುವವರು ಭರತ್ ರೆಡ್ಡಿ ಮತ್ತು ಸತೀಶ್ ರೆಡ್ಡಿ. ಆದರೆ ಇದನ್ನು ಸಮರ್ಥಿಸಿಕೊಳ್ಳಲು ಭರತ್ ರೆಡ್ಡಿ ಪ್ರಯತ್ನಿಸುತ್ತಿದ್ದಾರೆ” ಎಂದು ಶ್ರೀರಾಮುಲು ಆಕ್ರೋಶ ವ್ಯಕ್ತಪಡಿಸಿದರು.
ಭರತ್ ರೆಡ್ಡಿ ಬಳ್ಳಾರಿಯನ್ನು ಸುಟ್ಟು ಭಸ್ಮ ಮಾಡುತ್ತೇನೆ ಎಂದು ಹೇಳಿರುವ ಆರೋಪವನ್ನೂ ಅವರು ಉಲ್ಲೇಖಿಸಿದರು. “ಇಂತಹ ಹೇಳಿಕೆಗಳಿದ್ದರೂ ಅವರ ಮೇಲೆ ಇದುವರೆಗೆ ಕ್ರಮ ಕೈಗೊಂಡಿಲ್ಲ” ಎಂದು ಟೀಕಿಸಿದರು.
ಇದನ್ನೂ ಓದಿ: ಹುಬ್ಬಳ್ಳಿ: ಮತದಾರರ ಪಟ್ಟಿ ಪರಿಶೀಲನೆ ವೇಳೆ ಗಲಾಟೆ – ಬಿಜೆಪಿ ಕಾರ್ಯಕರ್ತೆ ಬಂಧನ ಸಂದರ್ಭದಲ್ಲಿ ಹಲ್ಲೆ ಆರೋಪ – ವೀಡಿಯೊ ವೈರಲ್
ಸರ್ಕಾರದ ವಿರುದ್ಧ ಕಟುವಾದ ಟೀಕೆ: ಸತೀಶ್ ರೆಡ್ಡಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ “ರಾಜಾಧಿತ್ಯ” ನೀಡಲಾಗುತ್ತಿದೆ ಎಂದು ಆರೋಪಿಸಿದ ಶ್ರೀರಾಮುಲು, “ಸರ್ಕಾರ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸುತ್ತಿದೆ. ಬರ್ತಡೇ ವೇಳೆ ಲಾಂಗು ಹಿಡಿದು ಕೇಕ್ ಕತ್ತರಿಸಿದರೆ ತಕ್ಷಣ ಬಂಧನ ಮಾಡುತ್ತಾರೆ. ಆದರೆ ಇಲ್ಲಿ ಗಂಭೀರ ಅಪರಾಧಗಳಿದ್ದರೂ ಶಾಸಕರನ್ನು ಬಂಧಿಸುತ್ತಿಲ್ಲ” ಎಂದು ಹೇಳಿದರು.
“ಶಾಸಕರನ್ನು ಕೂಡಲೇ ಬಂಧಿಸಬೇಕು. ಇಲ್ಲದಿದ್ದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ. ನಮ್ಮ ಕಾರ್ಯಕರ್ತರು ಮತ್ತು ನಮ್ಮ ಕುಟುಂಬದ ಸದಸ್ಯರನ್ನು ಈ ಪ್ರಕರಣದಲ್ಲಿ ಸೇರಿಸಲಾಗುತ್ತಿದೆ” ಎಂದು ಶ್ರೀರಾಮುಲು ಆರೋಪಿಸಿದರು.
ಇದನ್ನೂ ಓದಿ: ಬಾಲಕನ AI ಜ್ಞಾನಕ್ಕೆ ಬೆರಗಾದ ಶಶಿ ತರೂರ್
ಈ ಹೇಳಿಕೆಗಳ ಬಳಿಕ ಬಳ್ಳಾರಿ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ಆರಂಭವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಮತ್ತು ಪೊಲೀಸರ ಪ್ರತಿಕ್ರಿಯೆ ಇನ್ನಷ್ಟೇ ಬರಬೇಕಿದೆ.






















