ಕಾನೂನು ಸುವ್ಯವಸ್ಥೆ ಹಾಳು ಮಾಡಿದ್ದೇ ಈ ಸರ್ಕಾರದ ದೊಡ್ಡ ಸಾಧನೆ
ಬಳ್ಳಾರಿ: ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ದಿನದಿಂದಲೇ ಇಡೀ ರಾಜ್ಯ ಒಂದು ರೀತಿಯ “ಉರಿಯುವ ಮನೆ”ಯಂತಾಗಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರ ವಾಗ್ದಾಳಿ ನಡೆಸಿದರು. ಬಳ್ಳಾರಿಯಲ್ಲಿ ಬಿಜೆಪಿ ಹೋರಾಟದ ಹಿನ್ನೆಲೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದ್ದು, ಜನರಿಗೂ, ಶಾಸಕರಿಗೂ ರಕ್ಷಣೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ರಾಜ್ಯದೆಲ್ಲೆಡೆ ಗಲಭೆ, ಅತ್ಯಾಚಾರ, ದರೋಡೆ ಪ್ರಕರಣಗಳು ನಿರಂತರವಾಗಿ ನಡೆಯುತ್ತಿವೆ. ಆದರೆ ಸರ್ಕಾರಕ್ಕೆ ಇದರ ಬಗ್ಗೆ ಯಾವುದೇ ಕಾಳಜಿಯೇ ಇಲ್ಲ. ಲಂಚ, ಹೊಡೆದಾಟ, ಅಧಿಕಾರ ಹಸ್ತಾಂತರದ ಜಗಳಗಳಲ್ಲಿ ಸರ್ಕಾರ ಮುಳುಗಿದೆ. ಜನ ನಮ್ಮನ್ನು ಏಕೆ ಗೆಲ್ಲಿಸಿದರು ಎಂಬುದನ್ನೇ ಈ ಸರ್ಕಾರ ಮರೆತಿದೆ. ಮತದಾರರಿಗೆ ಕವಡೆ ಕಾಸಿನ ಮೌಲ್ಯವೂ ನೀಡದ ಸರ್ಕಾರ ಇದು. ಇದು ಜನತೆಗೆ ಮಾಡಿದ ಅಪಮಾನ ಎಂದು ಅಶೋಕ್ ಕಿಡಿಕಾರಿದರು.
ಇದನ್ನೂ ಓದಿ: ರಸ್ತೆ ಅಪಘಾತ: ಮಾಜಿ ಸಚಿವ ರಾಜೂಗೌಡ ಪ್ರಾಣಾಪಾಯದಿಂದ ಪಾರು
ಬಳ್ಳಾರಿ ಘಟನೆ ಪೂರ್ವನಿಯೋಜಿತ – ಜನಾರ್ದನ ರೆಡ್ಡಿ ಹತ್ಯೆಗೆ ಸಂಚು: ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಗಲಭೆ ಕುರಿತು ಮಾತನಾಡಿದ ಅಶೋಕ್, ಇದು ಸಹಜ ಘಟನೆ ಅಲ್ಲ, ಪೂರ್ವನಿಯೋಜಿತ ಸಂಚು ಎಂದು ಆರೋಪಿಸಿದರು. “ಇಲ್ಲಿ ಬ್ಯಾನರ್ ಕಟ್ಟುವ ಅಗತ್ಯವೇನಿತ್ತು? ಇದರ ಹಿಂದೆ ಜನಾರ್ದನ ರೆಡ್ಡಿ ಅವರನ್ನು ಕೊಲ್ಲುವ ಉದ್ದೇಶವೇ ಇತ್ತು. ಶಾಸಕರನ್ನೇ ಕೊಲ್ಲುವಂತಹ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ” ಎಂದು ಆತಂಕ ವ್ಯಕ್ತಪಡಿಸಿದರು.
ರಾಜ್ಯದೆಲ್ಲೆಡೆ ಕಾನೂನು ಸುವ್ಯವಸ್ಥೆ ಹದಗೆಟ್ಟ ಉದಾಹರಣೆಗಳು: ಹುಬ್ಬಳ್ಳಿಯಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿದ ಘಟನೆ, ಮೈಸೂರಿನಲ್ಲಿ ಬಲೂನ್ ಮಾರುತ್ತಿದ್ದ ಮಹಿಳೆಯ ಮೇಲೆ ನಡೆದ ಅತ್ಯಾಚಾರ, ಶಿಡ್ಲಘಟ್ಟದಲ್ಲಿ ಮಹಿಳಾ ಆಯುಕ್ತರಿಗೆ ಅವಾಚ್ಯ ಶಬ್ದ ಬಳಕೆಯ ಪ್ರಕರಣಗಳನ್ನು ಉಲ್ಲೇಖಿಸಿದ ಅವರು, “ಇವೆಲ್ಲವೂ ಕಾಂಗ್ರೆಸ್ ಆಡಳಿತದ ಸಾಧನೆಗಳು” ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ: ಹೈಕಮಾಂಡ್ ಬೀದಿದಾಸಯ್ಯ ಸಿಎಂ ಮಾಡಿದರೂ ಒಪ್ಪಬೇಕಾಗುತ್ತದೆ
ಸರ್ಕಾರ ತೊಲಗಲೇಬೇಕು – ಹೋರಾಟ ನಿಲ್ಲುವುದಿಲ್ಲ: “ಈ ಸರ್ಕಾರ ತೊಲಗಲೇಬೇಕು. ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ಅನ್ನೋದೇ ಗೊತ್ತಿಲ್ಲ. ಗೃಹ ಸಚಿವರು ಇಲ್ಲದಂತಾಗಿದೆ. ಕಾನೂನು ಸುವ್ಯವಸ್ಥೆ ಹಾಳು ಮಾಡಿದ್ದೇ ಈ ಸರ್ಕಾರದ ದೊಡ್ಡ ಸಾಧನೆ” ಎಂದು ಅಶೋಕ್ ಕಿಡಿಕಾರಿದರು.
ಇತ್ತೀಚೆಗೆ ಒಬ್ಬ ಸಚಿವ ರಾಜೀನಾಮೆ ನೀಡಬೇಕಾಯಿತು. ಮುಂದಿನ ದಿನಗಳಲ್ಲಿ ಇನ್ನಷ್ಟು ಸಚಿವರು ರಾಜೀನಾಮೆ ಕೊಡಬೇಕಾಗುತ್ತದೆ ಎಂದು ಭವಿಷ್ಯ ನುಡಿದರು. ನಾಗೇಂದ್ರ ರಾಜೀನಾಮೆ ಕೊಡಿಸಿದ್ದು ನಮ್ಮ ಹೋರಾಟದ ಫಲ. ಸಿಐಡಿಗೆ ಕೊಟ್ಟರೆ ಪ್ರಕರಣ ಮುಚ್ಚಿ ಹಾಕುತ್ತಾರೆ. ಹೀಗಾಗಿ ಇಡೀ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ನಾವು ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ: ಬಳ್ಳಾರಿ: ಸಿದ್ದರಾಮಯ್ಯ ಕಾಂಗ್ರೆಸ್‌ನ ಕೊನೆಯ ಸಿಎಂ – ಕಾರಜೋಳ
ಒಂದು ಹೋರಾಟ ಮುಗಿಯುವ ಮುನ್ನ ಮತ್ತೊಂದು ಹೋರಾಟ: ಕೋಗಿಲು ಪ್ರಕರಣದ ಬಳಿಕ ಮಾಲಾಧಿಗಾರಿಗಳ ಮೇಲೆ ಹಲ್ಲೆ, ಶಿಡ್ಲಘಟ್ಟ ಪ್ರಕರಣ, ಈಗ ಬಳ್ಳಾರಿ ಘಟನೆ – ಒಂದು ಹೋರಾಟ ಮುಗಿಯುವ ಮುನ್ನ ಮತ್ತೊಂದು ಹೋರಾಟ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಡ್ರಗ್ಸ್, ಗೃಹಲಕ್ಷ್ಮೀ ಯೋಜನೆಯಲ್ಲಿನ ಲೂಟಿ ಸೇರಿದಂತೆ ದೊಡ್ಡ ಮಟ್ಟದ ಹೋರಾಟಗಳನ್ನು ಕೈಗೊಳ್ಳಲಾಗುವುದು. 5 ಸಾವಿರ ಕೋಟಿ ರೂಪಾಯಿ ಅವ್ಯವಹಾರವನ್ನು ನಾವು ಹಿಡಿದಿದ್ದೇವೆ. ಸರ್ಕಾರ ಕ್ಷಮೆ ಕೇಳುವಂತಾಯಿತು ಎಂದು ಅಶೋಕ್ ಹೇಳಿದರು. ಪಾದಯಾತ್ರೆ ಕುರಿತು ಕೋರ್ ಕಮಿಟಿಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಭೀಮಣ್ಣ ಖಂಡ್ರೆ ನಿಧನಕ್ಕೆ ಸಂತಾಪ: ಈ ವೇಳೆ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಡಾ. ಭೀಮಣ್ಣ ಖಂಡ್ರೆ ಅವರ ನಿಧನಕ್ಕೆ ಆರ್. ಅಶೋಕ್ ಸಂತಾಪ ಸೂಚಿಸಿದರು. “ಅವರು ವೀರಶೈವ ಮಹಾಸಭೆಯ ಅಧ್ಯಕ್ಷರಾಗಿದ್ದರು, ಶಾಸಕರಾಗಿ ಮತ್ತು ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅವರ ನಿಧನ ರಾಜ್ಯಕ್ಕೆ ದೊಡ್ಡ ನಷ್ಟ. ಅವರ ಕುಟುಂಬಕ್ಕೆ ದೇವರು ಶಕ್ತಿ ನೀಡಲಿ” ಎಂದು ಹೇಳಿದರು.






















