Home Advertisement
Home ನಮ್ಮ ಜಿಲ್ಲೆ ಬಳ್ಳಾರಿ ಆಕಸ್ಮಿಕ ಬೆಂಕಿ ಅವಘಡ: 4 ಎಕರೆ ಮೆಕ್ಕೆಜೋಳ ಬೆಳೆ ಕ್ಷಣಾರ್ಧದಲ್ಲಿ ಭಸ್ಮ

ಆಕಸ್ಮಿಕ ಬೆಂಕಿ ಅವಘಡ: 4 ಎಕರೆ ಮೆಕ್ಕೆಜೋಳ ಬೆಳೆ ಕ್ಷಣಾರ್ಧದಲ್ಲಿ ಭಸ್ಮ

0
99

ತೆಕ್ಕಲಕೋಟೆ (ಬಳ್ಳಾರಿ): ರೈತನು ಕಷ್ಟಪಟ್ಟು ಬೆಳೆದ ಬೆಳೆ ಕ್ಷಣಾರ್ಧದಲ್ಲಿ ಬೆಂಕಿಗೆ ಆಹುತಿಯಾಗಿ ಸುಟ್ಟು ಕರಕಲಾದ ಮನಕಲುಕುವ ಘಟನೆ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣದ ಸಮೀಪದ ಕೃಷಿಭೂಮಿಯಲ್ಲಿ ನಡೆದಿದೆ. ಪಟ್ಟಣದ ರೈತ ಕೆ. ರಸೂಲ್ ಸಾಬ್ ಅವರಿಗೆ ಸೇರಿದ ಸುಮಾರು ನಾಲ್ಕು ಎಕರೆ ಕೃಷಿಭೂಮಿಯಲ್ಲಿ ಬೆಳೆದಿದ್ದ ಮೆಕ್ಕೆಜೋಳದ ಬೆಳೆ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿಯಿಂದ ಸಂಪೂರ್ಣವಾಗಿ ನಾಶವಾಗಿದೆ.

ಕೆಲವೇ ನಿಮಿಷಗಳಲ್ಲಿ ಬೆಳೆ ಭಸ್ಮ: ಘಟನೆಯ ವೇಳೆ ಹೊಲದಲ್ಲಿ ಅಚಾನಕ್ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ನಿಮಿಷಗಳಲ್ಲಿ ಬೆಂಕಿ ವೇಗವಾಗಿ ಹರಡಿ ಹೊಲದ ಬಹುಭಾಗವನ್ನು ಆವರಿಸಿತು. ಗಾಳಿ ವೇಗವಾಗಿ ಬೀಸುತ್ತಿದ್ದರಿಂದ ಬೆಂಕಿ ಇನ್ನಷ್ಟು ವ್ಯಾಪಿಸಿ ಮೆಕ್ಕೆಜೋಳದ ಬೆಳೆ ಸಂಪೂರ್ಣವಾಗಿ ಸುಟ್ಟುಹೋಯಿತು.

ಬೆಂಕಿ ನಂದಿಸಲು ಪ್ರಯತ್ನ : ಬೆಂಕಿ ಕಾಣಿಸಿಕೊಂಡಾಗ ರೈತರು ಬೇರೆ ಹೊಲದ ಕೆಲಸದಲ್ಲಿ ನಿರತರಾಗಿದ್ದರು, ವಿಷಯ ತಿಳಿದು ಸ್ಥಳೀಯರು ಸ್ಥಳಕ್ಕೆ ಧಾವಿಸಿ ನೀರು ಎರಚಿ ಬೆಂಕಿ ನಂದಿಸಲು ಪ್ರಯತ್ನಿಸಿದರು. ಆದರೆ ಗಾಳಿಯ ತೀವ್ರತೆಯಿಂದಾಗಿ ಬೆಂಕಿಯನ್ನು ತಕ್ಷಣ ನಿಯಂತ್ರಿಸಲು ಸಾಧ್ಯವಾಗಲಿಲ್ಲ.

ಲಕ್ಷಾಂತರ ನಷ್ಟ: ಈ ಅವಘಡದಿಂದ ರೈತನಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ. ಈ ವರ್ಷ ಉತ್ತಮ ಬೆಳೆಯ ನಿರೀಕ್ಷೆ ಇಟ್ಟುಕೊಂಡಿದ್ದ ರೈತನಿಗೆ ಈ ಘಟನೆ ಭಾರೀ ಆಘಾತ ತಂದಿದೆ.

ಸರ್ಕಾರಕ್ಕೆ ಮನವಿ: ಈ ಕುರಿತು ಮಾತನಾಡಿದ ರೈತ ರಸೂಲ್ ಸಬ್, “ಸಾಲ ಮಾಡಿಕೊಂಡು ತುಂಬಾ ಕಷ್ಟಪಟ್ಟು ಬೆಳೆ ಬೆಳೆದಿದ್ದೆ. ಆದರೆ ಕ್ಷಣಾರ್ಧದಲ್ಲಿ ಎಲ್ಲವೂ ಬೆಂಕಿಗೆ ಆಹುತಿಯಾಯಿತು. ಸರ್ಕಾರ ತಕ್ಷಣ ಪರಿಹಾರ ನೀಡಿ ನಮ್ಮಂತಹ ರೈತರಿಗೆ ನೆರವಾಗಬೇಕು,” ಎಂದು ಮನವಿ ಮಾಡಿದ್ದಾರೆ.

ಘಟನೆ ಕುರಿತು ಮಾಹಿತಿ ತಿಳಿದ ಗ್ರಾಮಸ್ಥರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು.