Home Advertisement
Home ನಮ್ಮ ಜಿಲ್ಲೆ ಚಿತ್ರದುರ್ಗ ಚಿತ್ರದುರ್ಗ, ಬಳ್ಳಾರಿಯಲ್ಲಿ ಲೋಕಾಯುಕ್ತ ದಾಳಿ: ಅಧಿಕಾರಿಗಳಿಗೆ ಬಿಸಿ

ಚಿತ್ರದುರ್ಗ, ಬಳ್ಳಾರಿಯಲ್ಲಿ ಲೋಕಾಯುಕ್ತ ದಾಳಿ: ಅಧಿಕಾರಿಗಳಿಗೆ ಬಿಸಿ

0
110

ಚಿತ್ರದುರ್ಗ/ಬಳ್ಳಾರಿ: ರಾಜ್ಯದಲ್ಲಿ ಭ್ರಷ್ಟಾಚಾರ ವಿರುದ್ಧದ ಕಾರ್ಯಾಚರಣೆ ಮತ್ತಷ್ಟು ತೀವ್ರಗೊಂಡಿರುವ ಹಿನ್ನೆಲೆ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಚಿತ್ರದುರ್ಗ ಮತ್ತು ಬಳ್ಳಾರಿಯಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ಭ್ರಷ್ಟ ಅಧಿಕಾರಿಗಳಿಗೆ ಬಿಸಿಮುಟ್ಟಿಸಿದ್ದಾರೆ.

ಚಿತ್ರದುರ್ಗದಲ್ಲಿ ದಾಳಿ: ಚಿತ್ರದುರ್ಗ ನಗರದ ಮೆದೇಹಳ್ಳಿ ಬಡಾವಣೆಯಲ್ಲಿ ನಿರ್ಮಿತಿ ಕೇಂದ್ರದ ಮಾಜಿ ಅಕೌಂಟೆಂಟ್ ಸುಶೀಲಮ್ಮ ಅವರ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸುಶೀಲಮ್ಮ ಅವರು ಒಂದು ವರ್ಷ ಹಿಂದೆ ವಿಆರ್‌ಎಸ್ ಪಡೆದಿದ್ದು, ಸೇವೆಯ ಅವಧಿಯಲ್ಲಿ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿರುವ ಆರೋಪ ಕೇಳಿಬಂದಿತ್ತು.

ಇದೇ ಪ್ರಕರಣ ಸಂಬಂಧ ಹಿರಿಯೂರು ತಾಲೂಕಿನ ಯಾದಲಘಟ್ಟ ಗ್ರಾಮದ ತೋಟದ ಮನೆ ಮೇಲೂ ಶೋಧ ಕಾರ್ಯ ನಡೆಯಿತು. ಲೋಕಾಯುಕ್ತ ಎಸ್‌ಪಿ ವಾಸುದೇವರಾಮ್ ಮತ್ತು ಡಿವೈಎಸ್ಪಿ ಮೃತ್ಯುಂಜಯ ನೇತೃತ್ವದಲ್ಲಿ ದಾಖಲೆಗಳ ಪರಿಶೀಲನೆ ಮುಂದುವರಿದಿದೆ.

ಬಳ್ಳಾರಿಯಲ್ಲಿ ಲೋಕಾಯುಕ್ತ ದಾಳಿ: ಇನ್ನೊಂದೆಡೆ ಬಳ್ಳಾರಿ ನಗರದಲ್ಲೂ ಲೋಕಾಯುಕ್ತ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಶಿವಣ್ಣ ಅವರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ. ಸಿದ್ಧಾರ್ಥ್ ನಗರದಲ್ಲಿರುವ ನಿವಾಸ ಸೇರಿದಂತೆ ಒಟ್ಟು ನಾಲ್ಕು ಸ್ಥಳಗಳಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ಶಿವಣ್ಣ ಅವರು ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆ ಮತ್ತು ಭ್ರಷ್ಟಾಚಾರ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ.

ದಾಖಲೆಗಳ ಪರಿಶೀಲನೆ: ಎರಡೂ ಪ್ರಕರಣಗಳಲ್ಲಿ ಅಧಿಕಾರಿಗಳು ಮಹತ್ವದ ದಾಖಲೆಗಳು, ಬ್ಯಾಂಕ್ ವ್ಯವಹಾರಗಳು, ಆಸ್ತಿ ವಿವರಗಳನ್ನು ಪರಿಶೀಲಿಸುತ್ತಿದ್ದು, ಅಕ್ರಮ ಸಂಪಾದನೆಗೆ ಸಂಬಂಧಿಸಿದ ಪ್ರಮುಖ ಸುಳಿವುಗಳು ದೊರಕುವ ಸಾಧ್ಯತೆ ಇದೆ.