ಬಳ್ಳಾರಿ: ಜನಾರ್ದನರೆಡ್ಡಿ ಒಬ್ಬ ನೀಚ, ರಾಕ್ಷಸ. ಇಂತಹ ನೂರು ರಾಕ್ಷಸರು ಬಂದರೂ ನಾನು ಹೆದರುವುದಿಲ್ಲ. ಅವರನ್ನು ಆ ದೇವರೇ ಸಂಹಾರ ಮಾಡುತ್ತಾನೆ ಎಂದು ಶಾಸಕ ನಾರಾ ಭರತರೆಡ್ಡಿ ಹೇಳಿದರು.
ಬಳ್ಳಾರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಮಹರ್ಷಿ ವಾಲ್ಮೀಕಿ ನಮ್ಮ ಅಜ್ಜ, ನಮ್ಮ ಅಜ್ಜನ ಕಾರ್ಯಕ್ರಮ ನಾವು ಅದ್ದೂರಿಯಾಗಿ ಮಾಡಲು ನಿರ್ಧರಿಸಿದ್ದೇವು. ಬ್ಯಾನರ್‌ಗಳನ್ನು ರೆಡ್ಡಿ ಮನೆ ಮುಂದೆ ಕಟ್ಟಲು ಹೋಗಿಲ್ಲ. ನಾವು ರಸ್ತೆಗೆ ಕಟ್ಟಲು ಹೋಗಿದ್ದೇವು. ಸಿರುಗುಪ್ಪ ಮಾರ್ಗದ ರಸ್ತೆ ಜನಾರ್ದನ ರೆಡ್ಡಿಯದ್ದಲ್ಲ. ಅದು ಸಾರ್ವಜನಿಕರದ್ದು, ನಾವು ಟ್ಯಾಕ್ಸ್ ಕಟ್ಟಿ ಬ್ಯಾನರ್ ಕಟ್ಟಲು ಹೋಗಿದ್ದೇವು.
ಆದರೆ ಬ್ಯಾನರ್ ಹರಿದು ರಾದ್ಧಾಂತ ಮಾಡಿದ್ದಾರೆ. ಅಭಿವೃದ್ಧಿ ಕೆಲಸ ಸಹಿಸಲು ಆಗದೇ ಹೀಗೆ ರೆಡ್ಡಿ ಇಂತಹ ಕೃತ್ಯಕ್ಕೆ ಇಳಿದಿದ್ದಾನೆ. ಈಚೆಗೆ ಸುಪ್ರಿಂ ಕೋರ್ಟ್ ನಿ.ನ್ಯಾಯಾಧೀಶ ದುಲಿಂಶ ದುಲಿಯಾ ಸಮಿತಿಯೂ ಶಾಸಕ ಜನಾರ್ದನರೆಡ್ಡಿ ಅಕ್ರಮ ಗಣಿಗಾರಿಕೆ ಬಗ್ಗೆ ವರದಿ ನೀಡಿದೆ. ಆ ಪ್ರಕರಣ ಬದಲಾಯಿಸುವ ಉದ್ದೇಶದಿಂದ ಇಂತಹ ನೀಚ ಕೃತ್ಯಕ್ಕೆ ಜನಾರ್ದನ ರೆಡ್ಡಿ ಇಳಿದಿದ್ದಾನೆ. ಇಂತಹ ರಾಕ್ಷಸರು ಎಷ್ಟು ಜನರ ಬಂದರೂ ನನ್ನನ್ನು ಏನೂ ಮಾಡಲು ಆಗುವುದಿಲ್ಲ.
ಇದನ್ನೂ ಓದಿ: ರೆಡ್ಡಿ ಬಣಗಳ ಮಧ್ಯೆ ಘರ್ಷಣೆ: ಬಳ್ಳಾರಿ ಎಸ್ಪಿ ತಲೆದಂಡ
ಕಾಂಗ್ರೆಸ್ ಪಕ್ಷ, ರಾಜ್ಯ ನಾಯಕರು ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ ನನ್ನ ಜತೆ ಮಾತನಾಡಿದ್ದಾರೆ. ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ನಿಮ್ಮ ಜತೆ ನಾವಿದ್ದೇವೆ. ಯಾವುದೇ ಕಾರಣಕ್ಕೂ ಕುಗ್ಗಬೇಡ ಎಂಬುದಾಗಿ ಧೈರ್ಯ ತುಂಬಿದ್ದಾರೆ. ನಿಗದಿಯಂತೆ ರಾಜ್ಯದಲ್ಲಿನ ಸಮುದಾಯದ ಸಚಿವರು ಹಾಗೂ ಶಾಸಕರ ಸಮ್ಮುಖದಲ್ಲಿ ಜ.3ರಂದು ವಾಲ್ಮೀಕಿ ಪುತ್ಥಳಿ ಅನಾವರಣಗೊಳ್ಳಲಿದ್ದು, ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಅದ್ಧೂರಿಯಾಗಿ ನೆರವೇರಲಿದೆ.
ಜಿಲ್ಲೆಯಲ್ಲಿ ಕೆಲವರು ಮೊದಲಿನಿಂದಲೂ ರಾಕ್ಷಸರ ಅಟ್ಟಹಾಸ ನಡೆಯುತ್ತಿದೆ. ಜನಾರ್ದನ ರೆಡ್ಡಿಯೊಬ್ಬ ನೀಚ. ಅವನ ಮನೆ ಮುಂದೆ ಬ್ಯಾನರ್ ಹಾಕಿಲ್ಲ. ರಸ್ತೆಯಲ್ಲಿ ಬ್ಯಾನರ್ ಹಾಕಿದಕ್ಕೆ ಅಕ್ಷೇಪಿಸಿ ಕಲ್ಲು ತೂರಾಟ ನಡೆಸಿ ಗಲಾಟೆಗೆ ಪ್ರೇರಪಿಸಿದ್ದಾರೆ ಎಂದು ಆರೋಪಿಸಿದರು. ಈ ಘಟನೆಯಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತ, ತಮ್ಮನ ಸಾವಾಗಿದ್ದು ದುಖಃದಲ್ಲಿದ್ದೇವೆ. ಇಂತಹ ರಾಕ್ಷಸರ ಮಟ್ಟ ಹಾಕುವೆ ಎಂದು ಹೇಳಿದರು.





















