ಬಳ್ಳಾರಿ: ಬಳ್ಳಾರಿಯಲ್ಲಿ ಹೊಸ ವರ್ಷದ ದಿನ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರು ಬುಧವಾರ ತೀವ್ರ ಆರೋಪಗಳನ್ನು ಮಾಡಿದ್ದು, ಘಟನೆಗೆ ಸಂಬಂಧಿಸಿದಂತೆ ರಾಜಕೀಯ, ಪೊಲೀಸ್ ಅಧಿಕಾರಿಗಳು ಮತ್ತು ಶಾಸಕರ ವಿರುದ್ಧ ಗಂಭೀರ ಹೇಳಿಕೆಗಳನ್ನು ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜನಾರ್ಧನ ರೆಡ್ಡಿ, “ನಮ್ಮ 33 ಕಾರ್ಯಕರ್ತರ ಮೇಲೆ ಸೆಕ್ಷನ್ 107 ಅಡಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಇದು ಏಕಪಕ್ಷೀಯ ಮತ್ತು ರಾಜಕೀಯ ಪ್ರೇರಿತ ಕ್ರಮ” ಎಂದು ಆರೋಪಿಸಿದರು.
ಇದನ್ನೂ ಓದಿ: ಬಳ್ಳಾರಿ: ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ
ಜನವರಿ 1ರಂದು ಸಂಜೆ 7 ಗಂಟೆ ಸುಮಾರಿಗೆ ಸತೀಶ್ ರೆಡ್ಡಿ ಅವರು ಗನ್‌ಮ್ಯಾನ್‌ಗಳೊಂದಿಗೆ ಬಂದು ಗಲಾಟೆ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ. ಈ ವೇಳೆ ತಮ್ಮ ಆಪ್ತರಾದ ಚಾನಳ್ ಶೇಖರ್ ಅವರನ್ನು ಶೂಟ್ ಮಾಡಲು ಪ್ಲಾನ್ ಮಾಡಲಾಗಿತ್ತು ಎಂಬ ಗಂಭೀರ ಆರೋಪವನ್ನೂ ಮುಂದಿಟ್ಟಿದ್ದಾರೆ.
“ಚಾನಳ್ ಶೇಖರ್ ಅವರು ಲಿಂಗಾಯತ ಸಮುದಾಯದವರು ಎಂಬ ಕಾರಣಕ್ಕೆ ಶೂಟ್ ಮಾಡಲು ಸಂಚು ರೂಪಿಸಲಾಗಿದೆ. ಆದರೆ ಅವರ ಆಯುಷ್ಯ ಗಟ್ಟಿಯಾಗಿದೆ. ಅದಕ್ಕಾಗಿಯೇ ಅವರು ಬದುಕಿದ್ದಾರೆ” ಎಂದು ಜನಾರ್ಧನ ರೆಡ್ಡಿ ಹೇಳಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ: ಮತದಾರರ ಪಟ್ಟಿ ಪರಿಶೀಲನೆ ವೇಳೆ ಗಲಾಟೆ – ಬಿಜೆಪಿ ಕಾರ್ಯಕರ್ತೆ ಬಂಧನ ಸಂದರ್ಭದಲ್ಲಿ ಹಲ್ಲೆ ಆರೋಪ – ವೀಡಿಯೊ ವೈರಲ್
ಘಟನೆಯ ವೇಳೆ ಭರತ್ ರೆಡ್ಡಿ ಜೊತೆ ಬಂದಿದ್ದ ರಾಜಶೇಖರ ಅವರಿಗೆ ಗುಂಡೇಟು ಬಿದ್ದಿದೆ ಎಂದು ಅವರು ಆರೋಪಿಸಿದರು. ಅಲ್ಲದೇ, “ಭರತ್ ರೆಡ್ಡಿ ಕುಡಿದ ಅಮಲಿನಲ್ಲಿ, ಗಾಂಜಾ ಸೇವಿಸಿ ಸ್ಥಳಕ್ಕೆ ಬಂದಿದ್ದರು. ನನ್ನ ಮನೆ ಭಸ್ಮ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದರು” ಎಂಬ ಆರೋಪವನ್ನೂ ಮಾಡಿದರು.
ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಕೋರ್ ಕಮಿಟಿಯಲ್ಲಿ ಒತ್ತಾಯಿಸಲಾಗಿದೆ ಎಂದು ತಿಳಿಸಿದ ಅವರು, ಇದೇ ತಿಂಗಳು 17ರಂದು ಬಳ್ಳಾರಿಯಲ್ಲಿ ಬೃಹತ್ ರ್ಯಾಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಘೋಷಿಸಿದರು.
ಇದನ್ನೂ ಓದಿ: ಬಾಲಕನ AI ಜ್ಞಾನಕ್ಕೆ ಬೆರಗಾದ ಶಶಿ ತರೂರ್
ಈ ನಡುವೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (ಡಿಕೆಶಿ) ಅವರ ಹೇಳಿಕೆಗಳ ಮೇಲೂ ಜನಾರ್ಧನ ರೆಡ್ಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ಮೊನ್ನೆ ಡಿಕೆಶಿ ದುರಹಂಕಾರದಿಂದ ಮಾತನಾಡಿದ್ದಾರೆ. ‘ಜನಾರ್ಧನ ರೆಡ್ಡಿಗೆ ತಲೆ, ಎದೆಗೆ ಗುಂಡೇಟು ಬಿದ್ದಿದೆಯಾ?’ ಎಂದು ಪ್ರಶ್ನಿಸಿದ್ದಾರೆ. ಇದು ದುರ್ಯೋಧನದ ದುರಹಂಕಾರದ ಮಾತು” ಎಂದು ಟೀಕಿಸಿದರು.
ಘಟನೆಗೆ ಸಂಬಂಧಿಸಿ ಎಎಸ್‌ಪಿ ರವಿಕುಮಾರ್, ಡಿವೈಎಸ್‌ಪಿ ನಂದಾರೆಡ್ಡಿ ಮತ್ತು ಶಾಸಕ ಭರತ್ ರೆಡ್ಡಿ ಮೂವರು ಸೇರಿ ಪ್ಲಾನ್ ಮಾಡಿದ್ದಾರೆ ಎಂದು ಆರೋಪಿಸಿದ ಜನಾರ್ಧನ ರೆಡ್ಡಿ, ಈ ಮೂವರ ವಿರುದ್ಧ ಬ್ರೂಸ್ ಪೇಟೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಸಾಲಿಗ್ರಾಮ ಡಿವೈನ್ ಪಾರ್ಕ್ ಸಂಸ್ಥಾಪಕ ಚಂದ್ರಶೇಖರ್ ಉಡುಪ ನಿಧನ
ಆದರೆ, “ಬ್ರೂಸ್ ಪೇಟೆ ಠಾಣೆಯ ಸಿಪಿಐ ಮಹಾಂತೇಶ್ ಇದುವರೆಗೆ ಎಫ್‌ಐಆರ್ ದಾಖಲಿಸಿಲ್ಲ. ಈ ಕುರಿತು ಕಾನೂನು ಸಲಹೆ ಪಡೆದು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು” ಎಂದು ಅವರು ಹೇಳಿದರು.
ಈ ಹೇಳಿಕೆಗಳ ಬಳಿಕ ಬಳ್ಳಾರಿ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ಆರಂಭವಾಗಿದ್ದು, ಪ್ರಕರಣವು ಇನ್ನಷ್ಟು ತಿರುವು ಪಡೆಯುವ ಸಾಧ್ಯತೆ ಇದೆ.






















