ರಾಜಶೇಖರ್ ಡಬಲ್ ಪೋಸ್ಟ್ ಮಾರ್ಟಂ: HDK ಸಮರ್ಥನೆ

0
5

ಬೆಂಗಳೂರು / ಬಳ್ಳಾರಿ: ಬಳ್ಳಾರಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತನ ಕಗ್ಗೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮರಣೋತ್ತರ ಪರೀಕ್ಷೆ (ಪೋಸ್ಟ್ ಮಾರ್ಟಂ) ವಿಚಾರದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಕೇಂದ್ರ ಸಚಿವ ಹಾಗೂ ಜೆಡಿಎಸ್‌ ನಾಯಕ ಹೆಚ್.ಡಿ. ಕುಮಾರಸ್ವಾಮಿ ಅವರು ಮಾಡಿದ್ದಾರೆ.

ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್‌ ಹಂಚಿಕೊಂಡಿರುವ ಅವರು, “ಬಳ್ಳಾರಿಯಲ್ಲಿ ಕಗ್ಗೊಲೆಯಾದ ನಿಮ್ಮದೇ ಪಕ್ಷದ ನತದೃಷ್ಟ ಕಾರ್ಯಕರ್ತನ ಡಬಲ್ ಪೋಸ್ಟ್ ಮಾರ್ಟಂ ಕಥಾನಕದ ಬಗ್ಗೆ ನಾನು ಹೇಳಿದ್ದು ಸತ್ಯ. ಸತ್ತ ಶರೀರವನ್ನೂ ರಾಜಕೀಯ ಸ್ವಾರ್ಥಕ್ಕೆ ಬಳಸಿಕೊಳ್ಳುವ ನಿಮ್ಮ ಕೀಳು ನಡವಳಿಕೆ ಕುರಿತು ನಾನು ಹೇಳಿದ್ದು ಅಕ್ಷರಶಃ ನಿಜ” ಎಂದು ಕಟುವಾಗಿ ಟೀಕಿಸಿದ್ದಾರೆ.

ಇದನ್ನೂ ಓದಿ: ಬಳ್ಳಾರಿ ಪ್ರಕರಣ: ಮೃತ ರಾಜಶೇಖರ್ ಮನೆಗೆ ಭೇಟಿ ನೀಡಿದ ಡಿಸಿಎಂ

ತಕ್ಷಣವೇ ಬ್ರೈನ್ ಮ್ಯಾಪಿಂಗ್‌ಗೆ ಒಳಪಡಿಸಿ: ಡಬಲ್ ಪೋಸ್ಟ್ ಮಾರ್ಟಂ ನಡೆದಿಲ್ಲ ಎನ್ನುವ ಸರ್ಕಾರದ ವಾದವನ್ನು ಪ್ರಶ್ನಿಸಿರುವ ಕುಮಾರಸ್ವಾಮಿ, “ಡಬಲ್ ಪೋಸ್ಟ್ ಮಾರ್ಟಂ ಅಸತ್ಯವಾದರೆ ಬಿಮ್ಸ್ (BIMS) ಆಸ್ಪತ್ರೆಯ ಅಧಿಕ್ಷಕರನ್ನು ತಕ್ಷಣವೇ ಬ್ರೈನ್ ಮ್ಯಾಪಿಂಗ್‌ಗೆ ಒಳಪಡಿಸಿ. ಆಗ ನಿಮ್ಮ ಪೋಸ್ಟ್ ಮಾರ್ಟಂ ಮಾಯಾಜಾಲ ಬಯಲಾಗುತ್ತದೆ. ಮಾಡಿಸುತ್ತೀರಾ ಮಾನ್ಯ ಮಂತ್ರಿಗಳೇ?” ಎಂದು ಸವಾಲು ಎಸೆದಿದ್ದಾರೆ.

ಮಾತುಗಳಲ್ಲೇ ಪ್ರಶ್ನೆ ಅಡಗಿದೆ: ಪ್ರಕರಣ ಮುಚ್ಚಿಹಾಕಲು ರಾಜ್ಯ ಸರ್ಕಾರ ಮಹಾನ್ ಹರಸಾಹಸ ನಡೆಸುತ್ತಿದೆ ಎಂದು ಆರೋಪಿಸಿದ ಅವರು, ಬಿಮ್ಸ್ ಅಧಿಕ್ಷಕರ ಹೇಳಿಕೆಯನ್ನು ತಾವು ಗಮನಿಸಿದ್ದಾಗಿ ತಿಳಿಸಿದ್ದಾರೆ. ಅವರ ಹೇಳಿಕೆಯ ಪ್ರಕಾರ, ಸಂಜೆ 6 ಗಂಟೆಗೆ ಆರಂಭವಾದ ಮರಣೋತ್ತರ ಪರೀಕ್ಷೆ ಸುಮಾರು 3 ಗಂಟೆಗಳ ಕಾಲ ನಡೆಯಿತು. ಮೃತದೇಹದಲ್ಲಿ ಅನೇಕ ಚೂರುಗಳು ಇದ್ದವು ಎಂಬ ವಿವರಣೆಯನ್ನೂ ನೀಡಲಾಗಿದೆ. ಆದರೆ ಈ ಮಾತುಗಳಲ್ಲೇ ಪ್ರಶ್ನೆಯೂ ಅಡಗಿದೆ, ಉತ್ತರವೂ ಇದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಇದನ್ನೂ ಓದಿ: ಧಾರವಾಡ ಹೈಕೋರ್ಟ್‌ಗೆ ಬಾಂಬ್ ಬೆದರಿಕೆ

ಎಷ್ಟು ವೈದ್ಯರು ಬೇಕು? : “ಮೊದಲ ವೈದ್ಯರೇ ಮರಣೋತ್ತರ ಪರೀಕ್ಷೆಯನ್ನು ಪೂರ್ಣಗೊಳಿಸಬಹುದಿತ್ತು. ಹಾಗಿದ್ದರೂ ಇನ್ನೊಬ್ಬ ವೈದ್ಯರನ್ನು ಕರೆಸಿಕೊಳ್ಳಲು ಕಾರಣವೇನು? ಮೃತದೇಹ ಪರೀಕ್ಷೆಗೆ ಎಷ್ಟು ವೈದ್ಯರು ಬೇಕು? ಮರಣೋತ್ತರ ಪರೀಕ್ಷೆ ವೇಳೆ ನೀವು ಜೀವ ಉಳಿಸಬೇಕಿತ್ತಾ ಅಥವಾ ಸತ್ಯ ಹುಡುಕಬೇಕಿತ್ತಾ? ಆ ಸಂದರ್ಭದಲ್ಲಿ ಕರೆಸಬೇಕಿದ್ದವರು ಫಾರೆನ್ಸಿಕ್ ತಜ್ಞರು” ಎಂದು ಅವರು ಪ್ರಶ್ನಿಸಿದ್ದಾರೆ.

ಇದಲ್ಲದೆ, ಪೋಸ್ಟ್ ಮಾರ್ಟಂ ವೇಳೆ ಇಬ್ಬರು ವೈದ್ಯರ ನಡುವೆ ನಡೆದ ತಿಕ್ಕಾಟದ ವಿವರಗಳು ಕೂಡ ತಮಗೆ ತಿಳಿದಿವೆ ಎಂದು ಕುಮಾರಸ್ವಾಮಿ ಪರೋಕ್ಷವಾಗಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಯಶ್ Toxicಗೆ ಹೊಸ ‘ವಸಂತ’: ರುಕ್ಕು ನಯಾ ಲುಕ್ಕು

“ಸಮಾಜವನ್ನು ಹಾಳು ಮಾಡಲು ಅಥವಾ ತನಿಖೆಯ ದಿಕ್ಕು ತಪ್ಪಿಸಲು ಮಾಹಿತಿ ಇಲ್ಲದೆ ನಾನು ಮಾತನಾಡಿಲ್ಲ. ಮೃತದೇಹವನ್ನೂ ನಿಮ್ಮ ಮನೆಹಾಳು ರಾಜಕೀಯಕ್ಕೆ ಬಳಸಿಕೊಂಡಿರುವುದನ್ನು ರಾಜ್ಯದ ಜನತೆಗೆ ಗಮನಕ್ಕೆ ತಂದಿದ್ದೇನೆ. ನಾನು ಪ್ರಶ್ನೆ ಮಾಡಿದ್ದೇನೆ” ಎಂದು ತಮ್ಮ ಹೇಳಿಕೆಯನ್ನು ಅವರು ಸಮರ್ಥಿಸಿಕೊಂಡಿದ್ದಾರೆ.

ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಮತ್ತೊಂದು ತೀವ್ರ ಚರ್ಚೆಗೆ ಕಾರಣವಾಗಿದ್ದು, ಬಳ್ಳಾರಿ ಕೊಲೆ ಪ್ರಕರಣದ ತನಿಖೆ ಹಾಗೂ ಮರಣೋತ್ತರ ಪರೀಕ್ಷೆಯ ಪ್ರಕ್ರಿಯೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅನುಮಾನ ಮತ್ತು ಕುತೂಹಲ ಹೆಚ್ಚಿಸಿದೆ.

Previous articleನದಿಗೆ ಬಿದ್ದು ಮೀನುಗಾರ ಸಾವು