ಬಳ್ಳಾರಿ: ಬ್ಯಾನರ್ ಗಲಾಟೆ ಆರುವ ಮುನ್ನವೇ ಮತ್ತೊಂದು ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಜನಾರ್ದನ ರೆಡ್ಡಿ, ಶ್ರೀರಾಮುಲು ಒಡೆತನದ ಜಿ ಸ್ಕ್ವೇಯರ್ ಲೇಔಟ್‌ನಲ್ಲಿರುವ ಮಾಡೆಲ್ ಹೌಸ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದೆ.
ಶುಕ್ರವಾರ ಸಂಜೆ ಜಿ ಸ್ಕ್ವೇಯರ್ ಲೇಔಟ್‌ನಲ್ಲಿರೋ ಮಾಡೆಲ್ ಹೌಸ್‌ಗೆ ಬೆಂಕಿ ಹೊತ್ತಿಕೊಂಡು ಉರಿದಿದೆ. ಇದು ಕಾಂಗ್ರೆಸ್‌ನವರ ಕೃತ್ಯ ಎಂದು ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಆರೋಪಿಸಿದ್ದಾರೆ.
“ಇತ್ತೀಚಿಗಷ್ಟೇ ಬ್ಯಾನರ್ ಗಲಾಟೆಯಾದಾಗ ಬೆಂಕಿ ಹಚ್ಚುತ್ತೇನೆಂದು ಹೇಳಲಾಗಿತ್ತು. ಇದಕ್ಕೆ ಇಂದಿನ ಘಟನೆಗೆ ಸಾಕ್ಷಿ ಎನ್ನುವಂತೆ ಇದೀಗ ನಮಗೆ ಸೇರಿದ ಮಾಡೆಲ್ ಹೌಸ್‌ಗೆ ಬೆಂಕಿ ಹಚ್ಚಿದ್ದಾರೆ. ನೂರು ಎಕರೆ ಪ್ರದೇಶದಲ್ಲಿ ಲೇಔಟ್ ಮಾಡಲಾಗಿತ್ತು. ಇದರಲ್ಲಿ ಮಾಡೆಲ್ ಹೌಸ್ ಮಾಡಿ ಖರೀದಿ ಮಾಡೋರಿಗೆ ತೋರಿಸಲು ನಿರ್ಮಾಣ ಮಾಡಲಾಗಿತ್ತು ಇದು ಕಾಂಗ್ರೆಸ್ ಅವರಿಂದಲೇ ಆಗಿದೆ” ಎಂದು ಸೋಮಶೇಖರ್ ರೆಡ್ಡಿ ಆರೋಪಿಸಿದ್ದಾರೆ.
ಎಸ್ಪಿಗೆ ಮಾಹಿತಿ: ಸಂಜೆ ಆರೂವರೆ ಹೊತ್ತಿಗೆ ಬೆಂಕಿ ಹತ್ತಿದೆ ಎನ್ನಲಾಗಿದೆ. ಇದನ್ನು ನೋಡಿದ ಕೆಲವರು ಬೆಂಕಿ ಹಚ್ಚಿದವರನ್ನು ಹಿಡಿಯಲು ಪ್ರಯತ್ನ ಪಟ್ಟಿದ್ದಾರೆ. ಆದರೆ ಆಗಿಲ್ಲ. ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸಿದ್ದಾರೆ. ಈ ಬಗ್ಗೆ ಮಾಜಿ ಸಚಿವ ಜಿ. ಜನಾರ್ದನರೆಡ್ಡಿ, ಎಸ್ಪಿ ಸುಮನ್ ಪನ್ನೇಕರ್ ಅವರಿಗೆ ಮಾಹಿತಿ ನೀಡಿದ್ದು, ಮುಂದಿನ ಬೆಳವಣಿಗೆ ಏನಾಗಲಿದೆ ಕಾದು ನೋಡಬೇಕಿದೆ.























