ರಿಪಬ್ಲಿಕ್ ಆಫ್ ಬಳ್ಳಾರಿ ಎಂಬ ಸ್ಥಿತಿಗೆ ಜಿಲ್ಲೆಯನ್ನು ತಳ್ಳಲಾಗಿದೆ: ಛಲುವಾದಿ ನಾರಾಯಣಸ್ವಾಮಿ ತೀವ್ರ ವಾಗ್ದಾಳಿ
ಬಳ್ಳಾರಿ: ಬಳ್ಳಾರಿಯಲ್ಲಿ ನಡೆಯುತ್ತಿರುವ ಬಿಜೆಪಿ ಬೃಹತ್ ಪ್ರತಿಭಟನಾ ಸಮಾವೇಶದ ಹಿನ್ನೆಲೆ ವಿಧಾನಪರಿಷತ್ ವಿಪಕ್ಷ ನಾಯಕ ಛಲುವಾದಿ ನಾರಾಯಣಸ್ವಾಮಿ ಅವರು ಗಣಿಗಾರಿಕೆ ಉದ್ಯಮಿ ಜನಾರ್ಧನರೆಡ್ಡಿ ಅವರ ನಿವಾಸಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಅವರು ಮಾಧ್ಯಮದೊಂದಿಗೆ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಇದನ್ನು ವಿರೋಧಿಸಿ ಹೋರಾಟ ಅನಿವಾರ್ಯವಾಗಿದೆ ಎಂದು ಹೇಳಿದರು.
“ಇಂದು ರಿಪಬ್ಲಿಕ್ ಆಫ್ ಬಳ್ಳಾರಿ ಎಂಬ ಸ್ಥಿತಿಗೆ ಜಿಲ್ಲೆಯನ್ನು ತಳ್ಳಲಾಗಿದೆ. ಇಲ್ಲಿ ಗುಂಡಾಗಿರಿ, ಗುಂಡಾವರ್ತಿ ಹೆಚ್ಚಾಗಿದೆ. ಈ ಎಲ್ಲ ಅಕ್ರಮಗಳ ವಿರುದ್ಧವಾಗಿ ಬಿಜೆಪಿ ಪ್ರತಿಭಟನಾ ಸಮಾವೇಶವನ್ನು ಹಮ್ಮಿಕೊಂಡಿದೆ” ಎಂದು ನಾರಾಯಣಸ್ವಾಮಿ ತಿಳಿಸಿದರು.
ಇದನ್ನೂ ಓದಿ: ಮುತ್ಸದ್ದಿ ರಾಜಕಾರಣಿ ಭೀಮಣ್ಣ ಖಂಡ್ರೆ ಇನ್ನಿಲ್ಲ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಟ್ಟಹಾಸ ಮೆರೆಯುತ್ತಿದ್ದು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರೇ ಗುಂಡಾಗಳಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು. “ಈ ಗುಂಡಾಗಿರಿಗೆ ಉತ್ಕಟ ವಿರೋಧ ವ್ಯಕ್ತಪಡಿಸಬೇಕಾಗಿದೆ. ಇಡೀ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕಾಂಗ್ರೆಸ್ ನಾಯಕರಿಗೆ ಒಂದು ನ್ಯಾಯ, ಸಾಮಾನ್ಯ ಜನರಿಗೆ ಮತ್ತೊಂದು ನ್ಯಾಯ ಎಂಬ ಸ್ಥಿತಿ ನಿರ್ಮಾಣವಾಗಿದೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸಂವಿಧಾನದ ಬಗ್ಗೆ ಕಾಂಗ್ರೆಸ್ ನಾಯಕರು ಭಾಷಣ ಮಾಡುತ್ತಾರೆ, ಆದರೆ ಅವರ ನಡವಳಿಕೆ ಸಂಪೂರ್ಣ ಭಿನ್ನವಾಗಿದೆ ಎಂದು ಟೀಕಿಸಿದರು. “ಹೇಳುವುದು ಒಂದು, ಮಾಡುವುದು ಮತ್ತೊಂದು. ಕಾಂಗ್ರೆಸ್ ಸರ್ಕಾರ ಸಂವಿಧಾನಕ್ಕೆ ಅಪಚಾರ ಮಾಡುತ್ತಿದೆ. ಸಂವಿಧಾನದ ಕಗ್ಗೊಲೆ ಮಾಡಲಾಗುತ್ತಿದೆ. ಇದನ್ನೆಲ್ಲ ನೋಡಿ ನಾವು ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿದರು.
ಇದನ್ನೂ ಓದಿ: ಬೇಡ್ತಿ–ಅಘನಾಶಿನಿ ನದಿ ತಿರುವು ಯೋಜನೆ: ಸದ್ಯ ಸರ್ವೆ ಇಲ್ಲ
ಜನರಿಗೆ ನ್ಯಾಯ ಒದಗಿಸಬೇಕು ಹಾಗೂ ಜನರ ರಕ್ಷಣೆಗೆ ಬಿಜೆಪಿ ಮುಂದಾಗಿದೆ ಎಂದು ತಿಳಿಸಿದ ಅವರು, “ಹೀಗಾಗಿ ಬಳ್ಳಾರಿಯಿಂದಲೇ ನಮ್ಮ ಹೋರಾಟ ಸಮಾವೇಶಕ್ಕೆ ಚಾಲನೆ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಇದೇ ರೀತಿಯ ಹೋರಾಟವನ್ನು ರಾಜ್ಯದ ವಿವಿಧ ಭಾಗಗಳಲ್ಲಿ ನಡೆಸಲಾಗುವುದು” ಎಂದು ಸ್ಪಷ್ಟಪಡಿಸಿದರು.
ಬಳ್ಳಾರಿಯಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, “ಪಾದಯಾತ್ರೆ ಕ್ಯಾನ್ಸಲ್ ಆಗಿಲ್ಲ. ಅದು ಮೊದಲೇ ಅಂತಿಮ ತೀರ್ಮಾನವಾಗಿರಲಿಲ್ಲ. ನಮ್ಮ ಸ್ಥಳೀಯ ನಾಯಕರಿಗೆ ಪಾದಯಾತ್ರೆ ಮಾಡುವ ತವಕ ಇದೆ. ಈ ಘಟನೆಯ ಬಗ್ಗೆ ಅವರಲ್ಲಿ ತೀವ್ರ ಬೇಗುದಿಯಿದೆ. ಆದರೆ ಪಾದಯಾತ್ರೆಯನ್ನು ತರಾತುರಿಯಲ್ಲಿ ಮಾಡುವುದಿಲ್ಲ. ಎಲ್ಲರೂ ಕುಳಿತು ಚರ್ಚಿಸಿ, ಸಮೂಹ ತೀರ್ಮಾನ ತೆಗೆದುಕೊಂಡು ಮುಂದಿನ ಹೆಜ್ಜೆ ಇಡಲಾಗುವುದು” ಎಂದು ಹೇಳಿದರು.
ಇದನ್ನೂ ಓದಿ: ಉದ್ಯೋಗ ಹುಡುಕುವ ಮನಸ್ಥಿತಿಯಿಂದ ಉದ್ಯೋಗ ಸೃಷ್ಟಿಸುವತ್ತ ಭಾರತ
ಬಳ್ಳಾರಿಯಲ್ಲಿ ಆರಂಭವಾದ ಈ ಪ್ರತಿಭಟನಾ ಸಮಾವೇಶ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯಮಟ್ಟದ ಹೋರಾಟಕ್ಕೆ ರೂಪಾಂತರಗೊಳ್ಳಲಿದೆ ಎಂಬ ಸಂದೇಶವನ್ನು ಬಿಜೆಪಿ ನಾಯಕತ್ವ ಈ ಮೂಲಕ ರವಾನಿಸಿದೆ.









