ಬಳ್ಳಾರಿ: ಬ್ಯಾನರ್ ಕಟ್ಟುವ ವಿಚಾರಕ್ಕೆ ಹೊತ್ತಿಕೊಂಡ ಕಿಡಿಯೊಂದು ಬಳ್ಳಾರಿ ರಾಜಕೀಯದಲ್ಲಿ ಮತ್ತೆ ಕಂಪನ ಎಬ್ಬಿಸಿದೆ. ಘರ್ಷಣೆ, ಸಾವು-ನೋವಿನ ಬಳಿಕ ಬಳ್ಳಾರಿಯಲ್ಲಿ ಉಂಟಾಗಿರುವ ಪ್ರಕ್ಷುಬ್ಧ ವಾತಾವರಣ ತಿಳಿಗೊಳಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಒಂದು ಸುಮೋಟೋ, ಮೂರು ಖಾಸಗಿ ದೂರು ಸೇರಿ ಒಟ್ಟು ನಾಲ್ಕು ಪ್ರತ್ಯೇಕ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಇದರ ನಡುವೆಯೇ ಘಟನೆ ಸಂಬಂಧ ಹೇಳಿಕೆ ಭರದಲ್ಲಿ ಶಾಸಕರಾದ ಜಿ. ಜನಾರ್ದನ ರೆಡ್ಡಿ, ಭರತ ರೆಡ್ಡಿ ಪರಸ್ಪರ ಹೇಳಿಕೆ, ಪ್ರತಿ ಹೇಳಿಕೆ ಏಕವಚನ, ಅವಾಚ್ಯ ಶಬ್ದಗಳ ನಿಂದನೆ ಮೂಲಕ ದ್ವೇಷ ರಾಜಕಾರಣವನ್ನು ಪುನರುಚ್ಚರಿಸಿದ್ದಾರೆ.
ಮಾಜಿ ಸಚಿವ ಶ್ರೀರಾಮುಲು, ಶಾಸಕ ಜನಾರ್ದನ ರೆಡ್ಡಿ ಮನೆಗಳಿರುವ ಹಾಗೂ ಶುಕ್ರವಾರ ಗಲಾಟೆ ನಡೆದ ಹಾವಂಬಾವಿ ಪ್ರದೇಶದಲ್ಲಿ ಕಲಂ 144 ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಘಟನೆಯಲ್ಲಿ ಏರ್ ಫೈರಿಂಗ್ನಲ್ಲಿ ಗುಂಡೇಟಿಗೆ ಬಲಿಯಾದ ರಾಜಶೇಖರ ಮನೆ ಸೇರಿ ಬಳ್ಳಾರಿಯ ಪ್ರಮುಖ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಪಹರೆ ಹಾಕಲಾಗಿದೆ. ಹೆಚ್ಚುವರಿ ಭದ್ರತೆಗಾಗಿ ವಿಜಯನಗರ, ಚಿತ್ರದುರ್ಗ, ಕೊಪ್ಪಳ, ದಾವಣಗೆರೆ ಸೇರಿ ನೆರೆ-ಹೊರೆ ಜಿಲ್ಲೆಗಳ ಎಸ್ಪಿಗಳನ್ನು ಬಂದೋಬಸ್ತ್ಗೆ ನಿಯೋಜಿಸಲಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಬಳ್ಳಾರಿಗೆ ಆಗಮಿಸಿ ಘಟನೆ ಮಾಹಿತಿ ಪಡೆದಿದ್ದು, ಕಾಂಗ್ರೆಸ್ ಸರಕಾರ ಮತ್ತು ಕಾಂಗ್ರೆಸ್ ಶಾಸಕ ಭರತ ರೆಡ್ಡಿ ಅವರ ಪೂರ್ವನಿಯೋಜಿತ ಕೃತ್ಯವಿದು. ಇದೊಂದು ದೌರ್ಜನ್ಯ, ದಬ್ಬಾಳಿಕೆ, ದ್ವೇಷ ಸಾಧಿಸುವ ಸರಕಾರ ಎಂದು ಆರೋಪಿಸಿದ್ದಾರೆ.
ಇದರ ನಡುವೆ ಬಳ್ಳಾರಿಯಲ್ಲಿನ ಪರಿಸ್ಥಿತಿ ಹತೋಟಿಗೆ ತರಲು ಖುದ್ದು ಗೃಹಮಂತ್ರಿ ಡಾ. ಜಿ. ಪರಮೇಶ್ವರ ಸೂಚನೆ ಮೇರೆಗೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್. ಹಿತೇಂದ್ರ ಬಳ್ಳಾರಿಗೆ ದೌಡಾಯಿಸಿ ಮೊಕ್ಕಾಂ ಹೂಡಿದ್ದಾರೆ.






















