ಬಳ್ಳಾರಿ: ಹೊಸ ವರ್ಷದ ಮೊದಲ ದಿನವೇ ಬ್ಯಾನರ್ ಕಟ್ಟುವ ವಿಚಾರಕ್ಕೆ ಮಾಜಿ ಸಚಿವ ಜನಾರ್ದನ ರೆಡ್ಡಿ ಮನೆ ಮುಂದೆ ನಡೆದಿದ್ದ ಗಲಭೆ, ಗುಂಡೇಟಿನಿಂದ ಯುವಕ ರಾಜಶೇಖರ ಸಾವನ್ನಪ್ಪಿದ ಪ್ರಕರಣವನ್ನು ಸರಕಾರ ಸಿಐಡಿಗೆ ವಹಿಸಿದ ಬೆನ್ನಲ್ಲೇ ಸಿಐಡಿ ಪೊಲೀಸರು ಭಾನುವಾರ ಬಳ್ಳಾರಿಗೆ ಆಗಮಿಸಿ ಪ್ರಕರಣದ ಫೈಲ್‌ಗಳನ್ನು ವಶಕ್ಕೆ ಪಡೆದರು.
ಎಸ್ಪಿ ದರ್ಜೆಯ ಮಹಿಳಾ ಐಎಎಸ್ ಅಧಿಕಾರಿ ಡಾ. ಹರ್ಷಾ ಪ್ರಿಯಂವದಾ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಆಗಮಿಸಿದ ಸಿಐಡಿ ಪೊಲೀಸರು ಎಸ್ಪಿ ಡಾ. ಸುಮನ್ ಪೆನ್ನೇಕರ್ ಅವರಿಂದ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು.
ಹಲವು ಗಂಟೆಗಳ ಕಾಲ ಎಸ್ಪಿ ಕಚೇರಿಯಲ್ಲಿಯೇ ಸಭೆ ಮಾಡಿದ ಸಿಐಡಿ ಅಧಿಕಾರಿಗಳು ಪ್ರಕರಣದ ಕುರಿತು ದಾಖಲಾದ ಎಲ್ಲ 6 ಪ್ರತ್ಯೇಕ ಪ್ರಕರಣಗಳ ಕುರಿತು ಮತ್ತು ಪ್ರತಿ ಕೇಸ್‌ಗೆ ನಿಯೋಜನೆಗೊಂಡ ತನಿಖಾಧಿಕಾರಿಗಳಿಂದ ಇದುವರೆಗಿನ ತನಿಖೆಯ ಮಾಹಿತಿ ಪಡೆದುಕೊಂಡರು.
ಇದನ್ನೂ ಓದಿ: ಬಳ್ಳಾರಿ ಗಲಭೆ ಪ್ರಕರಣ: CBI ತನಿಖೆಗೆ ವಹಿಸಿದರೆ ಮಾತ್ರ ನ್ಯಾಯ
ಒಟ್ಟು 6 ಕೇಸ್‌ಗಳ ಪೈಕಿ ಎರಡು ಜಾತಿನಿಂದನೆ ಕೇಸ್‌ಗಳಾಗಿದ್ದು ಈ ಎರಡು ಕೇಸ್ ಹೊರತುಪಡಿಸಿ ಸುಮೊಟೋ ಕೇಸ್ ಮಾಜಿ ಸಚಿವ ಜನಾರ್ದನ ರೆಡ್ಡಿ, ಅವರ ಆಪ್ತರು ನೀಡಿದ ಕೇಸ್ ಹಾಗೂ ಶಾಸಕ ಭರತ ರೆಡ್ಡಿ ಆಪ್ತ ಚಾನಾಳ್ ಶೇಖರ್ ನೀಡಿದ್ದ ದೂರು ಸೇರಿ ಒಟ್ಟು 4 ಕೇಸ್ ಡಿಟೇಲ್ಸ್, ಫೈಲ್‌ಗಳನ್ನು ಪಡೆದುಕೊಂಡರು.
ಎಸ್ಪಿ ಪನ್ನೇಕರ್ ಅವರು 4 ಕೇಸ್‌ಗಳ ಎಲ್ಲ ದಾಖಲೆ, ಸಾಕ್ಷ್ಯ, ವಿಡಿಯೋ, ಸಿಸಿ ಟಿವಿ ಫುಟೇಜ್ ಸೇರಿ ಇದುವರೆಗೂ ಕೇಸ್‌ನಲ್ಲಿ ಪಡೆದುಕೊಂಡ ದಾಖಲೆಗಳನ್ನು ಹಸ್ತಾಂತರಿಸಿದರು. ಇದುವರೆಗೂ ಜಿಲ್ಲಾ ಪೊಲೀಸರೇ ನಡೆಸುತ್ತಿದ್ದ ತನಿಖೆ ಒಂದು ಭಾಗವಾದರೆ ಈಗ ಸಿಐಡಿ ಪೊಲೀಸರು ತನಿಖೆ ಆರಂಭಿಸಿದರು.






















