ಬಳ್ಳಾರಿ: ಬಳ್ಳಾರಿಯಲ್ಲಿ ನಡೆದ ಗಲಭೆ ಹಾಗೂ ಫೈರಿಂಗ್ ಪ್ರಕರಣದಲ್ಲಿ ಗುಂಡು ಹಾರಿಸಿದ್ದು ನನ್ನ ಕಡೆಯವರಾಗಿದ್ದರೆ, ಯಾವುದೇ ಬೇಲೂ ಪಡೆಯದೇ ಈ ಹೊತ್ತಿಗೇ ಎಸ್ಪಿ ಮೂಲಕ ಪೊಲೀಸರಿಗೆ ಶರಣಾಗುತ್ತಿದ್ದೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಬಿ. ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಗುಂಡು ಹಾರಿಸಿದ್ದು ಹಾಗೂ ಗೂಂಡಾಗಿರಿ ನಡೆಸಿದ್ದು ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿಯವರೇ ಎಂಬುದು ತನಿಖೆಯಿಂದ ಸ್ಪಷ್ಟವಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಪ್ರಕರಣದಲ್ಲಿ ಶಾಸಕ ಭರತ್ ರೆಡ್ಡಿಯೇ ಎ1 ಆರೋಪಿ ಆಗಿದ್ದು, ಪರೋಕ್ಷವಾಗಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ ಹತ್ಯೆಗೆ ಅವರೇ ಕಾರಣರಾಗಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ
ಇಂತಹ ಗಂಭೀರ ಆರೋಪಗಳ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಂದಾಲ್ ಏರ್‌ಪೋರ್ಟ್‌ನಲ್ಲಿ ಭರತ್ ರೆಡ್ಡಿಯನ್ನೇ ಕರೆಸಿ ವಿವರಣೆ ಪಡೆದಿದ್ದಾರೆ. ಅಲ್ಲದೆ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ಆರೋಪಿಯಾಗಿರುವ ಭರತ್ ರೆಡ್ಡಿಯ ಪಕ್ಕದಲ್ಲೇ ಕುಳಿತು ಪತ್ರಿಕಾಗೋಷ್ಠಿ ನಡೆಸುತ್ತಿದ್ದಾರೆ. ಇದನ್ನೆಲ್ಲಾ ನೋಡಿದರೆ ಈ ಸರ್ಕಾರ ಗೂಂಡಾಗಿರಿ ಹಾಗೂ ಗುಂಡಿನ ದಾಳಿ ನಡೆಸಿದವರನ್ನೇ ರಕ್ಷಿಸುವ ಕೆಲಸ ಮಾಡುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಶ್ರೀರಾಮುಲು ಆಕ್ರೋಶ ವ್ಯಕ್ತಪಡಿಸಿದರು.
ಜನವರಿ 1ರಂದು ನಡೆದ ಘಟನೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಒಂದೇ ಕಡೆಯಿಂದ ದಾಳಿ ನಡೆದಿದೆ ಎಂದು ಹೇಳಲು ಸಾಧ್ಯವಿಲ್ಲ. ನಮ್ಮ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ದಾಳಿ ಮಾಡಿದ ನಂತರ ನಮ್ಮವರೂ ಪ್ರತಿ ದಾಳಿ ಮಾಡಿದ್ದಾರೆ. ಆವೇಶದಲ್ಲಿ ಕಟ್ಟಿಗೆ, ಖಾರದ ಪುಡಿ ತಂದಿರಬಹುದು ಎಂಬುದನ್ನು ನಾನು ನಿರಾಕರಿಸುವುದಿಲ್ಲ. ಆದರೆ ನಮ್ಮ ಕಡೆಯಿಂದ ಯಾರೂ ಕೂಡ ಗುಂಡು ಹಾರಿಸಿಲ್ಲ. ಯಾರ ಪ್ರಾಣವೂ ತೆಗೆದುಕೊಂಡಿಲ್ಲ. ಪ್ರತಿ ದಾಳಿ ಮಾಡಿದ್ದಕ್ಕಾಗಿಯೇ ನಮ್ಮ ಕಾರ್ಯಕರ್ತರನ್ನು ಬಂಧಿಸಲಾಗುತ್ತಿದೆ ಎಂದು ಆರೋಪಿಸಿದರು.
ಇದನ್ನೂ ಓದಿ: ಹರಿಯಿತು ನೆತ್ತರು: ವಿವಾಹಿತ ಮಹಿಳೆಯ ಕತ್ತು ಕೊಯ್ದು ಭೀಕರ ಕೊಲೆ
ಇದೇ ಸಂದರ್ಭದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮೃತ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ ಮನೆಗೆ ತೆರಳಿ ಸಾಂತ್ವನ ಹೇಳುತ್ತಿರುವ ಕುರಿತು ಪ್ರತಿಕ್ರಿಯಿಸಿದ ಶ್ರೀರಾಮುಲು, ಸಾಂತ್ವನ ಹೇಳುವುದರಲ್ಲಿ ತಪ್ಪಿಲ್ಲ. ಆದರೆ ರಾಜಶೇಖರ ಯಾರಿಂದಾಗಿ ಸತ್ತರು ಎಂಬ ಸತ್ಯವನ್ನು ಅವರ ಕುಟುಂಬಕ್ಕೆ ಹೇಳಬೇಕು. ಈ ಸತ್ಯವನ್ನು ಮುಚ್ಚಿ ಹಾಕುವುದಕ್ಕಾಗಿಯೇ ಡಬಲ್ ಪೋಸ್ಟ್‌ಮಾರ್ಟಂ ಮಾಡಲಾಗಿದೆ ಎಂಬುದನ್ನು ಸರ್ಕಾರ ಒಪ್ಪಿಕೊಳ್ಳಬೇಕು ಎಂದು ಹೇಳಿದರು.
ಡಿಕೆ ಶಿವಕುಮಾರ್ ಸರ್ಕಾರದ ಸತ್ಯಶೋಧನಾ ಸಮಿತಿ ಈಗಾಗಲೇ ಪರಿಶೀಲನೆ ನಡೆಸಿದ್ದು, ವರದಿಯನ್ನೂ ನೀಡಲಿದೆ. ಆ ವರದಿಯನ್ನು ಆಧರಿಸಿ ಎಸ್‌ಐಟಿ ರಚಿಸಿ ಪ್ರಕರಣವನ್ನು ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.
ಇದನ್ನೂ ಓದಿ: ಧಾರವಾಡ: ಬೆಂಕಿ ಅನಾಹುತಕ್ಕೆ ಮೂರು ಅಂಗಡಿ ಭಸ್ಮ
ಗಲಭೆ ಪ್ರಕರಣ ಹಾಗೂ ರಾಜಶೇಖರ ಹತ್ಯೆಯ ಮೂಲಬೇರು ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿಯವರೇ. ಅವರ ಗನ್‌ಮ್ಯಾನ್‌ಗಳ ಗುಂಡಿನಿಂದಲೇ ಅಮಾಯಕ ವ್ಯಕ್ತಿಯ ಜೀವ ಹೋಗಿದೆ. ಈ ಪ್ರಕರಣದಲ್ಲಿ ಭರತ್ ರೆಡ್ಡಿಯೇ ಎ1 ಆರೋಪಿ ಎಂದು ಶ್ರೀರಾಮುಲು ಪುನರುಚ್ಚರಿಸಿದರು.
ಈ ಘಟನೆಯಲ್ಲಿ ನಿಜಕ್ಕೂ ನಮ್ಮ ಜೀವ ಉಳಿದಿದೆ. ಗುಂಡಿನ ದಾಳಿ ನಡೆದಿದೆ ಎಂಬ ಸುದ್ದಿ ತಿಳಿದ ನಂತರ 10 ವರ್ಷದ ಮಕ್ಕಳಿಂದ ಹಿಡಿದು 90 ವರ್ಷದ ವೃದ್ಧೆಯರವರೆಗೆ ‘ರಾಮುಲುಗೆ ಏನಾಯ್ತು?’ ಎಂದು ನನ್ನನ್ನು ನೋಡಲು, ಮಾತನಾಡಲು ಬರುತ್ತಿದ್ದಾರೆ. ಅವರ ಪ್ರೀತಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದು ಭಾವುಕರಾಗಿ ಹೇಳಿದರು























