ಬಳ್ಳಾರಿ: ಗಲಭೆ ನಡೆದು ಐದು ದಿನಗಳ ಬಳಿಕ‌ ಬಾಂಬ್ ಸ್ಕ್ವಾಡ್, ಸೋಕೋ‌ ತಂಡ

0
4

ಬಳ್ಳಾರಿ: ಶಾಸಕ ಜನಾರ್ಧನ ರೆಡ್ಡಿ ನಿವಾಸದ ಬಳಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆ ಹಾಗೂ ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿ, ಘಟನೆ ನಡೆದ ಐದು ದಿನಗಳ ನಂತರ ಬಾಂಬ್ ನಿಷ್ಕ್ರಿಯ ದಳ (Bomb Disposal Squad) ಹಾಗೂ ಸೋಕೋ (SOCO) ತಂಡಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದೆ.

ಘಟನೆಯ ತನಿಖೆಯ ಭಾಗವಾಗಿ ಬೆಂಗಳೂರು ಹಾಗೂ ಹುಬ್ಬಳ್ಳಿಯಿಂದ ಪ್ರತ್ಯೇಕ ವಿಶೇಷ ತಂಡಗಳು ಬಳ್ಳಾರಿಗೆ ಆಗಮಿಸಿದ್ದು, ಕಳೆದ ಒಂದು ಗಂಟೆಗೂ ಅಧಿಕ ಕಾಲದಿಂದ ಶೋಧ ಕಾರ್ಯವನ್ನು ನಡೆಸುತ್ತಿವೆ. ಫೈರಿಂಗ್ ನಡೆದ ಸ್ಥಳದ ಜೊತೆಗೆ ಶಾಸಕ ಜನಾರ್ಧನ ರೆಡ್ಡಿ ಅವರ ನಿವಾಸದ ಸುತ್ತಮುತ್ತಲ ಪ್ರದೇಶವನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ.

ಇದನ್ನೂ ಓದಿ:  ʼತಿಥಿʼ ಸಿನಿಮಾ ಖ್ಯಾತಿಯ ಹಿರಿಯ ನಟ ಸೆಂಚುರಿ ಗೌಡ ನಿಧನ

ಐದು ದಿನಗಳ ಬಳಿಕ ತನಿಖಾ ತಂಡಗಳ ಆಗಮನ : ಫೈರಿಂಗ್ ನಡೆದಿದ್ದು ಐದು ದಿನಗಳಾಗಿದ್ದು ಇದೀಗ ಬಾಂಬ್ ನಿಷ್ಕ್ರಿಯ ಹಾಗೂ ಸೋಕೋ ತಂಡಗಳು ಆಗಮಿಸಿರುವುದು ಸಾರ್ವಜನಿಕ ವಲಯದಲ್ಲಿ ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಇಷ್ಟು ದಿನಗಳ ಬಳಿಕ ಸಾಕ್ಷ್ಯಗಳು ಲಭ್ಯವಾಗುವ ಸಾಧ್ಯತೆ ಕಡಿಮೆ ಇರುವುದರಿಂದ ತನಿಖೆಯ ಗಂಭೀರತೆ ಕುರಿತು ಚರ್ಚೆಗಳು ಆರಂಭವಾಗಿವೆ.

ಬುಲೆಟ್ ಪತ್ತೆಗೆ ತೀವ್ರ ಶೋಧ: ಫೈರಿಂಗ್ ಪ್ರಕರಣದಲ್ಲಿ ಒಟ್ಟು ಏಳು ರೌಂಡ್‌ಗಳು ನಡೆದಿದ್ದವು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಫೈರಿಂಗ್‌ಗೆ ಬಳಕೆಯಾದ ಬುಲೆಟ್‌ಗಳನ್ನು ಪತ್ತೆಹಚ್ಚುವ ಉದ್ದೇಶದಿಂದ ಹುಬ್ಬಳ್ಳಿ ಬಾಂಬ್ ನಿಷ್ಕ್ರಿಯ ದಳದಿಂದ ಶೋಧ ಕಾರ್ಯ ಕೈಗೊಳ್ಳಲಾಗಿದೆ.

ಎನ್‌ಎಲ್‌ಜೆಡಿ (NLJD) ಹಾಗೂ ಡಿಎಸ್‌ಎಂಡಿ (DSMD) ಯಂತ್ರಗಳ ಸಹಾಯದಿಂದ ಶೋಧ ನಡೆಸಲಾಗುತ್ತಿದ್ದು, ಸ್ಥಳೀಯ ಪೊಲೀಸ್ ತಂಡದಿಂದ ಅಗತ್ಯ ಮಾಹಿತಿ ಹಾಗೂ ಸಹಕಾರ ಒದಗಿಸಲಾಗುತ್ತಿದೆ. ಪ್ರಕರಣದ ತನಿಖೆಯನ್ನು ತಾಂತ್ರಿಕವಾಗಿ ಬಲಪಡಿಸಲು ಸೋಕೋ ತಂಡವೂ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದೆ.

ಇದನ್ನೂ ಓದಿ:  ಹುಬ್ಬಳ್ಳಿ ಯುವತಿಯ ಮರ್ಯಾದಾಗೇಡು ಹತ್ಯೆ: ವಿಶೇಷ ನ್ಯಾಯಾಲಯ

ಈ ಪ್ರಕರಣವು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ತನಿಖೆಯ ಪ್ರಗತಿ ಹಾಗೂ ಪೊಲೀಸ್ ಇಲಾಖೆ ಕೈಗೊಳ್ಳುವ ಕ್ರಮಗಳ ಮೇಲೆ ಸಾರ್ವಜನಿಕರ ಗಮನ ಕೇಂದ್ರೀಕೃತವಾಗಿದೆ.

Previous articleದಾಂಡೇಲಿಯಲ್ಲಿ ಹಾರ್ನ್ ಬಿಲ್ ಹಬ್ಬಕ್ಕೆ ಸಿದ್ಧತೆ: ಪಕ್ಷಿವೀಕ್ಷಣೆಗೆ ಸುವರ್ಣಾವಕಾಶ