ಬಳ್ಳಾರಿ ಬ್ಯಾನರ್ ಗಲಾಟೆ ಪ್ರಕರಣ ತೀವ್ರಗೊಂಡ ತನಿಖೆ

0
2

ಬಳ್ಳಾರಿ: ನಗರದಲ್ಲಿ ಇತ್ತೀಚೆಗೆ ನಡೆದ ಬ್ಯಾನರ್ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ತೀವ್ರಗೊಂಡಿದ್ದು, ಈ ಹಿನ್ನೆಲೆಯಲ್ಲಿ ಮಾಜಿ ಸಚಿವ ಹಾಗೂ ಶಾಸಕ ಜನಾರ್ದನರೆಡ್ಡಿ ಅವರ ನಿವಾಸದ ಮುಂಭಾಗದಲ್ಲಿಯೇ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಬ್ಯಾನರ್ ವಿಚಾರವಾಗಿ ನಡೆದ ಘರ್ಷಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ತನಿಖೆಯನ್ನು ಗಂಭೀರವಾಗಿ ಮುಂದುವರೆಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಶಾಸಕ ಜನಾರ್ದನರೆಡ್ಡಿ ಅವರ ನಿವಾಸದ ಸುತ್ತಮುತ್ತಲ ಪ್ರದೇಶದಲ್ಲಿ ಪೊಲೀಸರು ಪಂಚನಾಮೆ ನಡೆಸಿದ್ದು, ಸ್ಥಳ ಮಹಜರು ಮಾಡಿ ಅಗತ್ಯ ಮಾಹಿತಿ ಸಂಗ್ರಹಿಸಿದ್ದಾರೆ. ಗಲಾಟೆ ನಡೆದ ಸಂದರ್ಭದ ಸನ್ನಿವೇಶ, ಬ್ಯಾನರ್ ಅಳವಡಿಕೆ ಹಿನ್ನೆಲೆ, ಘರ್ಷಣೆ ನಡೆದ ಕ್ರಮ ಸೇರಿದಂತೆ ಹಲವು ಅಂಶಗಳ ಕುರಿತು ತನಿಖಾಧಿಕಾರಿಗಳು ಸೂಕ್ಷ್ಮವಾಗಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಗುಂಡು ಹಾರಿಸಿದವರು ನನ್ನ ಕಡೆಯವರಾಗಿದ್ರೇ, ಇಷ್ಟೊತ್ತಿಗೆ ಶರಣಾಗುತ್ತಿದ್ದೆ

ಈ ವೇಳೆ ಪೊಲೀಸರು ಶಾಸಕರಿಂದಲೇ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ. ಬ್ಯಾನರ್ ಗಲಾಟೆ ಹೇಗೆ ಆರಂಭವಾಯಿತು, ಯಾವ ಸಂದರ್ಭದಲ್ಲಿಘರ್ಷಣೆ ಉಂಟಾಯಿತು, ಘಟನೆ ನಡೆಯುವ ವೇಳೆಗೆ ತಾವು ಎಲ್ಲಿದ್ದೆವು ಎಂಬುದನ್ನು ಶಾಸಕ ಜನಾರ್ದನರೆಡ್ಡಿ ತನಿಖಾಧಿಕಾರಿಗಳಿಗೆ ವಿವರವಾಗಿ ತಿಳಿಸಿದ್ದಾರೆ. ಯಾವುದೇ ರೀತಿಯ ಅಕ್ರಮ ಅಥವಾ ಕಾನೂನುಬಾಹಿರ ಚಟುವಟಿಕೆಯಲ್ಲಿ ತಾನು ಭಾಗಿಯಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದು, ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.

ಘರ್ಷಣೆಯಲ್ಲಿ ವ್ಯಕ್ತಿಯೊಬ್ಬರ ಸಾವಿಗೆ ಕಾರಣವಾದ ಹಿನ್ನೆಲೆಯಲ್ಲಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿ, ಸ್ಥಳೀಯ ಸಾಕ್ಷಿಗಳ ಹೇಳಿಕೆ ಹಾಗೂ ಇತರ ತಾಂತ್ರಿಕ ಸಾಕ್ಷ್ಯಗಳನ್ನು ಕೂಡ ಸಂಗ್ರಹಿಸಲಾಗುತ್ತಿದೆ.

ಇದನ್ನೂ ಓದಿ: ಜಿಲ್ಲಾ‌ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ

ನಗರದಲ್ಲಿ ಬ್ಯಾನರ್ ಅಳವಡಿಕೆ ವಿಚಾರವಾಗಿ ರಾಜಕೀಯ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ ಈ ಪ್ರಕರಣ ಮಹತ್ವ ಪಡೆದುಕೊಂಡಿದ್ದು, ತನಿಖೆಯ ಫಲಿತಾಂಶದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಬಳ್ಳಾರಿ ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಭದ್ರತಾ ಕ್ರಮಗಳನ್ನು ಕೂಡ ಹೆಚ್ಚಿಸಲಾಗಿದೆ.

Previous articleಗುಂಡು ಹಾರಿಸಿದವರು ನನ್ನ ಕಡೆಯವರಾಗಿದ್ರೇ, ಇಷ್ಟೊತ್ತಿಗೆ ಶರಣಾಗುತ್ತಿದ್ದೆ