ಹೈಕೋರ್ಟ್ ಜಡ್ಜ್ ನೇತೃತ್ವದಲ್ಲಿ ತನಿಖೆಯಾಗಲಿ

0
30

ಬಳ್ಳಾರಿ: ಕಾಂಗ್ರೆಸ್ ಸರಕಾರ ದ್ವೇಷ ಭಾಷಣದ ವಿರುದ್ದ ಕಾನೂನು ತರಲು ಹೊರಟಿದೆ. ಈ ಸರಕಾರಕ್ಕೆ ತಾಕತ್ತು, ನೈತಿಕತೆ ಇದ್ದರೆ ಕೂಡಲೇ ತಮ್ಮದೇ ಶಾಸಕ ಭರತ ರೆಡ್ಡಿಯನ್ನು ಬಂಧಿಸಿ ಜೈಲಿಗೆ ಹಾಕಬೇಕು ಘಟನೆಯ ಸಂಪೂರ್ಣ ತನಿಖೆಗೆ ಹೈಕೋರ್ಟ್ ಜಡ್ಜ್‌ ಒಬ್ಬರನ್ನು ನೇಮಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹಿಸಿದರು.

ಬ್ಯಾನರ್ ಅಳವಡಿಕೆ ಸಂಬಂಧ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಉಂಟಾದ ಘರ್ಷಣೆ ಹಿನ್ನೆಲೆಯಲ್ಲಿ ಬಳ್ಳಾರಿಗೆ ಆಗಮಿಸಿ ಗಾಯಗೊಂಡ ಬಿಜೆಪಿ ಕಾರ್ಯಕರ್ತರ ಆರೋಗ್ಯ ವಿಚಾರಿಸಿದರು. ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಶಾಸಕ ಭರತ ರೆಡ್ಡಿಯಿಂದ ಗೂಂಡಾಗಿರಿಯಾಗಿದೆ. ಸಾವಿರಾರು ಗೂಂಡಾಗಳನ್ನು ಕರೆದುಕೊಂಡು ಬಂದಿದ್ದರು. ಇಂತಹ ಗೂಂಡಾಗರ್ದಿ ನಡೆಯಲ್ಲ.

ಸತೀಶ್ ರೆಡ್ಡಿ ಅನ್ನೋ ವ್ಯಕ್ತಿ ಖಾಸಗಿ ವ್ಯಕ್ತಿಗಳನ್ನು ಬಳಸಿ ಫೈರ್ ಮಾಡಿದ್ದಾನೆ. ಇದನ್ನು ಬಿಜೆಪಿ ಖಂಡಿಸುತ್ತದೆ. ಗುಂಡಾ ಗರ್ದಿ ಮೂಲಕ ನಮ್ಮ ನಾಯಕರನ್ನು ಹೆದರಿಸೋ ಕೆಲಸ ಆಗಿದೆ. ಜನಾರ್ದನ ರೆಡ್ಡಿ, ಶ್ರೀರಾಮುಲು, ಆನಂದ್‌ಸಿಂಗ್ ರನ್ನ ಹೆದರಿಸೋ ಕೆಲಸ ಮಾಡಲಾಗುತ್ತಿದೆ. ಇದರಿಂದ ಯಾರೂ ಹೆದರುವುದಿಲ್ಲ. ನಮ್ಮ ಕಾರ್ಯಕರ್ತರು ಧೃತಿಗೆಡೋ ಅವಶ್ಯಕತೆ ಇಲ್ಲ ಎಂದರು.

ವಾಲ್ಮೀಕಿ ಪುತ್ಥಳಿ ವಿಚಾರ ಗಲಾಟೆ ಮಾಡಿದ ಕಾಂಗ್ರೆಸ್ ಶಾಸಕರಿಗೆ ನಾಚಿಕೆ ಆಗಬೇಕು. ಮಹರ್ಷಿ ವಾಲ್ಮೀಕಿಯನ್ನು ಪೂಜಿಸಬೇಕು ಅನ್ನೋ ಕಾರಣಕ್ಕೆ ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರು ಶ್ರೀರಾಮುಲು ಮನವಿ ಮೇರೆಗೆ ವಾಲ್ಮೀಕಿ ಜಯಂತಿ ಘೋಷಿಸಿ, ರಜಾ ದಿನ ಘೋಷಣೆ ಮಾಡಿದ್ದರು. ವಾಲ್ಮೀಕಿ ಭವನಕ್ಕೆ ಹಣ ಕೊಡಿಸಿದ್ದು ರಾಮುಲು ಅವರು. 25 ವರ್ಷದ ಹಿಂದೆಯೇ ಎಸ್‌ಪಿ ಸರ್ಕಲ್‌ನಲ್ಲಿ ಪುತ್ಥಳಿ ಇದೆ. ಆದರೆ ಅಲ್ಲಿ ಮತ್ತೊಂದು ಪುತ್ಥಳಿಯನ್ನು ರಾಜಕೀಯ ತೆವಲಿಗಾಗಿ ಮಾಡಲಾಗುತ್ತಿದೆ ಎಂದರು.

ಜನಾರ್ದನ ರೆಡ್ಡಿ ಮನೆ ಮೇಲೆ ಖಾಸಗಿ ವ್ಯಕ್ತಿಗಳು ಗುಂಡು ಹಾರಿಸಿದ್ದು ಅಕ್ಷಮ್ಯ ಅಪರಾಧ. ಸಿಎಂ ಹಾಗೂ ಗೃಹ ಸಚಿವರು ದ್ವೇಷ ಭಾಷಣ ಕಾಯ್ದೆ ತರೋಕೆ ಹೊರಟಿದ್ದರು. ಈಗ ಮೊದಲ ಆರೋಪಿ ಭರತ್ ರೆಡ್ಡಿ. ಶಾಸಕನನ್ನು ಒದ್ದು ಒಳಗೆ ಹಾಕಿ ಎಂದು ಆಗ್ರಹಿಸಿದ ವಿಜಯೇಂದ್ರ, ಬಿಜೆಪಿ ಇದನ್ನು ಬಲವಾಗಿ ಖಂಡಿಸುತ್ತದೆ. ಈ ಘಟನೆಯ ಪೂರ್ಣ ತನಿಖೆ ನಡೆಯಬೇಕು. ಎಸ್‌ಐಟಿ ರಚನೆ ಮಾಡಿ ತೇಪೆ ಹಚ್ಚೋ ಕೆಲಸ ಆಗಬಾರದು. ಹೈಕೋರ್ಟ್ ಜಡ್ಜ್‌ರಿಂದ ತನಿಖೆ ಆಗಬೇಕು. ರಾಜ್ಯ ಸರ್ಕಾರ ಈ ಪ್ರಕರಣ ಗಂಭೀರವಾಗಿ ಪರಿಗಣಿಸಬೇಕು. ಈ ಬಗ್ಗೆ ಬೆಂಗಳೂರಲ್ಲಿ ಆರ್. ಅಶೋಕ ನೇತೃತ್ವದಲ್ಲಿ ನಿಯೋಗ ಹೋಗಿ ದೂರು ನೀಡಲಾಗಿದೆ. ಇಲ್ಲೂ ಕೂಡ ಈಗ ಜನಾರ್ದನ ರೆಡ್ಡಿ ಅವರು ಗೂಂಡಾಗಿರಿ ಮಾಡಲು ಬಂದ ವ್ಯಕ್ತಿಗಳ ವಿರುದ್ಧ ಕೇಸ್ ದಾಖಲಿಸುತ್ತಾರೆ ಎಂದು ಹೇಳಿದರು.

Previous articleಬಳ್ಳಾರಿ ಗಲಾಟೆ: ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಸಂಚು