ಬೆಳಗಾವಿ: ನವೆಂಬರ್ ಅಥವಾ ಡಿಸೆಂಬರ್ ಒಳಗೆ ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆ ಕಳೆದುಕೊಳ್ಳುವುದು ನೂರಕ್ಕೆ ನೂರರಷ್ಟು ನಿಜ ಎಂದು ವಿಪಕ್ಷ ನಾಯಕ ಆರ್. ಅಶೋಕ ಮತ್ತೊಮ್ಮೆ ಹೇಳಿದ್ದಾರೆ.
ಶುಕ್ರವಾರ ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರ ಹಂಚಿಕೆ ಸಂಬಂಧ ಒಪ್ಪಂದ ಆಗಿರುವುದು ಸತ್ಯ. ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಕ್ರಾಂತಿ ಅಂತ ಹೇಳಿ ಒಬ್ಬರು ಸಚಿವರು ಈಗ ಮನೆಗೆ ಹೋಗಿದ್ದಾರೆ. ಈಗ ಜಗಳ ಆರಂಭವಾಗಿದೆ. ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಡಲ್ಲ, ಡಿಕೆಶಿ ಹಠ ಬಿಡುತ್ತಿಲ್ಲ. ಕಾಂಗ್ರೆಸ್ ಜಗಳದಲ್ಲಿ ಸರ್ಕಾರ ಪತನವಾದ್ರೆ ನಾವೇನೂ ಸರ್ಕಾರ ಮಾಡಲ್ಲ. ನಾವು ಚುನಾವಣೆಗೆ ಹೋಗಲು ಸಿದ್ಧರಿದ್ದೇವೆ ಎಂದು ಅಶೋಕ ನುಡಿದರು.
ಬೆಂಗಳೂರಿನಲ್ಲಿ ಗುಂಡಿಯಿಲ್ಲದ ರಸ್ತೆಯೇ ಇಲ್ಲ ಎಂಬಂತಾಗಿದೆ. ಹಾಗೆ ಇರುವ ರಸ್ತೆ ತೋರಿಸಿದವರಿಗೆ ಬಹುಮಾನ ಘೋಷಣೆ ಮಾಡಬಹುದು ಎಂದು ವ್ಯಂಗ್ಯವಾಡಿದ ಅವರು, ಕಾಂಗ್ರೆಸ್ ಶಾಸಕರೇ ಅನುದಾನ ಬಂದಿಲ್ಲ ಎಂದು ಹೇಳುತ್ತಿರುವುದು ವಿಪರ್ಯಾಸ ಎಂದು ಕಿಡಿ ಕಾರಿದರು.
ತಮ್ಮ ತಮ್ಮ ದಸರಾ ಹಬ್ಬ ಮನೆಯಲ್ಲಿ ಆಚರಣೆ ಮಾಡಲು ಆಗದೇ ಬೀದಿಯಲ್ಲಿ ಸಂತ್ರಸ್ತರು ನಿಂತಿದ್ದಾರೆ. ಇಷ್ಟಾದರೂ ರಾಜ್ಯ ಸರ್ಕಾರ ಅವರ ನೆರವಿಗೆ ಬಾರದೆ ಕುಂಭಕರ್ಣನಂತೆ ಗಾಢ ನಿದ್ದೆಯಲ್ಲಿದೆ ಎಂದು ಕುಟುಕಿದರು.
ಜವಾಬ್ದಾರಿ ಇದ್ರೆ ನೆರೆ ಪೀಡಿತ ಪ್ರದೇಶಕ್ಕೆ ಸಿಎಂ ತಂಡ ಭೇಟಿ ನೀಡಬೇಕಿತ್ತು. ರಾಜ್ಯದಲ್ಲಿ ಮಳೆಯಿಂದ ಎಷ್ಟು ಹಾನಿಯಾಗಿದೆ ಎಂಬ ವರದಿ ಕೇಂದ್ರಕ್ಕೆ ಕಳುಹಿಸಬೇಕಿತ್ತು, ಆದರೆ ಕಳಿಸಿಲ್ಲ. ಕೇಂದ್ರ ಗೃಹ ಸಚಿವ, ಕೃಷಿ ಸಚಿವರನ್ನು ರಾಜ್ಯದ ನಾಯಕರು ಈವರೆಗೆ ಭೇಟಿ ಮಾಡಿಲ್ಲ. ಎಷ್ಟು ಮನೆಗಳಿಗೆ ಹಾನಿಯಾಗಿದೆ ಎಂಬ ಬಗ್ಗೆ ಸಿಎಂ ಬಾಯಿಯಿಂದ ಬಂದಿಲ್ಲ. ನಾನೇ ಸಿಎಂ ಆಗಿ ಮುಂದುವರೆಯುತ್ತೇನೆಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಯಾವಾಗ ಇಳಿತೀರಾ ಎಂದು ಅಲ್ಲಿನ ನಾಯಕರು ಕೇಳುವಂತಾಗಿದೆ ಎಂದರು.