ಬೆಳಗಾವಿ(ಗುರ್ಲಾಪುರ): ಕಬ್ಬಿಗೆ ಸೂಕ್ತ ಬೆಲೆಗಾಗಿ ಕಳೆದ 9 ದಿನಗಳಿಂದ ಅಹೋರಾತ್ರಿ ಹೋರಾಟ ನಡೆಸುತ್ತಿದ್ದ ರೈತರಿಗೆ ಕೊನೆಗೂ ಗೆಲುವು ಸಿಕ್ಕಿದೆ. ಸರ್ಕಾರ ಟನ್ ಕಬ್ಬಿಗೆ 3300 ಹಾಗೂ 50-50 ನೆರವಿನ ಭರವಸೆ ನೀಡಿದ ಹಿನ್ನೆಲೆಯಲ್ಲಿ ರೈತರು ಸಂಭ್ರಮ ಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ಬೆಳಗಿನಿಂದ ನಡೆಯುತ್ತಿದ್ದ ಬೆಳವಣಿಗೆ ಗಮನಿಸುತ್ತಿದ್ದ ರೈತರು ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆ ಮಾಲಿಕರ ನಡೆಯ ಬಗ್ಗೆ ನಿಗಾ ವಹಿಸಿದ್ದರು. ಕೊನೆಗೂ ಸರ್ಕಾರ ಒಂದು ಹಂತದಲ್ಲಿ ಸೂಕ್ತ ತೀರ್ಮಾನಕ್ಕೆ ಬಂದಿದ್ದರಿಂದ ಗುರ್ಲಾಪುರ ಕ್ರಾಸ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರಲ್ಲಿ ಸಂತಸ ಮೂಡಿತು.
ರೈತರು ಸರ್ಕಾರದ ನಿರ್ಧಾರ ಸ್ವಾಗತಿಸಿ ಪ್ರತಿಭಟನಾ ವೇದಿಕೆಯಲ್ಲೇ ಸಂಭ್ರಮ ಆಚರಿಸಿದರು. ಪಟಾಕಿ ಸಿಡಿಸಿ ಸರ್ಕಾರದ ತೀರ್ಮಾಣ ಸ್ವಾಗತಿಸಿದರು.
ಸಂಜೆ 6.10 ನಿಮಿಷಕ್ಕೆ ಹೋರಾಟಗಾರ ಶಶಿಕಾಂತ ಪಡಸಲಗಿ ಗುರೂಜಿ ಸರ್ಕಾರದ ನಿರ್ಧಾರ ಘೋಷಿಸಿದರು. ಇದರಿಂದ ರೈತರು ಕುಣಿಯುತ್ತ ಸಂಭ್ರಮಾಚರಣೆಯಲ್ಲಿ ತೊಡಗಿದರು.
ಸ್ವಾಮಿಗಳಿಂದ ಹೋರಾಟದ ಗಟ್ಟಿ ಕಾಳುಗಳೆಂದು ಕರೆಸಿಕೊಂಡಿದ್ದ ರೈತ ಸಂಘದ ರಾಜ್ಯ ಅಧ್ಯಕ್ಷ ಚೂನಪ್ಪ ಪೂಜಾರಿ, ಶಶಿಕಾಂತ ಗುರೂಜಿ ಸೇರಿದಂತೆ ಮತ್ತಿತರ ರೈತ ಮುಖಂಡರು ಕೊನೆಗೂ ರೈತರಿಗೆ ನ್ಯಾಯ ಕೊಡಿಸಿದ ಸಂತೃಪ್ತಿ ಎಲ್ಲರಲ್ಲಿತ್ತು.


























