ಬೆಳಗಾವಿ: ಬೈಲಹೊಂಗಲ ತಾಲೂಕಿನ ಇನಾಮದಾರ ಸಕ್ಕರೆ ಕಾರ್ಖಾನೆಯಲ್ಲಿ ಸಂಭವಿಸಿದ ದುರಂತದಲ್ಲಿ ಸಾವಿನ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.
ವಾಲ್ವ್‌ನಿಂದ ಬಿಸಿ ಪದಾರ್ಥ ಸೋರಿಕೆಯಾಗಿ ಕಾರ್ಮಿಕರ ಮೇಲೆ ಬಿದ್ದ ಘಟನೆಯಲ್ಲಿ ಗಾಯಗೊಂಡಿದ್ದ ಇನ್ನೂ ಐವರನ್ನು ಬೆಳಗಾವಿ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಬುಧವಾರ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಎಲ್ಲ ಐವರೂ ಮೃತಪಟ್ಟಿದ್ದಾರೆ.
ಗುರುವಾರ ಮೃತಪಟ್ಟವರನ್ನು ಅಥಣಿಯ ಮಂಜುನಾಥ ತೇರದಾಳ, ಬೈಲಹೊಂಗಲ ತಾಲೂಕಿನ ಅರವಳ್ಳಿ ಗ್ರಾಮದ ಮಂಜುನಾಥ ಕಾಜಗಾರ, ಗೋಕಾಕ ತಾಲೂಕಿನ ಬರತೇಶ್ ಸಾರವಾಡಿ, ಬಾಗಲಕೋಟೆ ಮರೆಗುದ್ದಿಯ ಗುರುಪಾದಪ್ಪ ತಮ್ಮನ್ನವರ, ಗೋಕಾಕ ತಾಲೂಕು ಗಿಣಿ ಹೊಸೂರು ಗ್ರಾಮದ ರಾಘವೇಂದ್ರ ಗಿರಿಯಾಲ ಎಂದು ಗುರುತಿಸಲಾಗಿದೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅಕ್ಷಯ ತೋಪಡೆ, ದೀಪಕ್ ಮುನ್ನೋಳಿ, ಸುದರ್ಶನ್ ಬನೋಶಿ ನಿನ್ನೆ ಮೃತರಾಗಿದ್ದರು. ಈ ಮೂಲಕ ದುರಂತದಲ್ಲಿ ಗಾಯಗೊಂಡಿದ್ದ ಎಲ್ಲರೂ ಮೃತಪಟ್ಟಿದ್ದಾರೆ.
ಮಾಹಿತಿಯ ಪ್ರಕಾರ ಕಾರ್ಖಾನೆಯ ನಂ.1 ಕಂಪಾರ್ಟಮೇಂಟ್‌ನಲ್ಲಿ ವಾಲ್ವ ರಿಪೇರಿ ಕಾರ್ಯ ನಡೆಯುತ್ತಿದ್ದ ವೇಳೆ ಬಿಸಿ ಪದಾರ್ಥ ಸೋರಿಕೆಯಾದ ಪರಿಣಾಮ ರಿಪೇರಿ ಕಾರ್ಯದಲ್ಲಿ ತೊಡಗಿದ್ದ ಹಲವಾರು ಕಾರ್ಮಿಕರು ಗಾಯಗೊಂಡಿದ್ದರು.
ಮೂವರ ವಿರುದ್ಧ ಕೇಸ್: ಈ ಸಂಬಂಧ ಮುರಗೋಡ ಪೊಲೀಸ್ ಠಾಣೆಯಲ್ಲಿ ಕಾರ್ಖಾನೆಯ ಜನರಲ್ ಮ್ಯಾನೇಜರ್ ವಿ.ಸುಬ್ಬುರತಿನಂ, ಇಂಜಿನಿಯರಿಂಗ್ ಹೆಡ್ ಪ್ರವೀಣಕುಮಾರ, ಟಾಕಿ ಮತ್ತು ಡೆಪ್ಯೂಟಿ ಜನರಲ್ ಮ್ಯಾನೇಜರ್ ಎಸ್. ಬಿನೋದಕುಮಾರ ಎಂಬುವವರ ಮೇಲೆ ನಿರ್ಲಕ್ಷಶ್ಯದ ಆರೋಪದಡಿ ಪ್ರಕರಣ ದಾಖಲಾಗಿದೆ. ತನಿಖೆ ಚುರುಕಾಗಿದೆ ಎಂದು ಎಸ್ಪಿ ರಾಮರಾಜನ್ ಕೆ. ತಿಳಿಸಿದ್ದಾರೆ.






















