ಬೆಳಗಾವಿ: ರಾಜ್ಯ ಸರ್ಕಾರವು ಸರಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿರುವ ಕ್ರಮವನ್ನು ತೀವ್ರವಾಗಿ ಖಂಡಿಸಿ, ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿ ಸಂಘಟನೆಗಳು ಮಂಗಳವಾರ (ಡಿ.16) ಬೆಳಗಾವಿ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಎಐಡಿಎಸ್ಒ (AIDSO) ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆ ನಗರದ ಚನ್ನಮ್ಮ ವೃತ್ತದಲ್ಲಿ ನಡೆಯಿತು.
ಪ್ರತಿಭಟನೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಹಾಗೂ ಸಂಘಟನೆಯ ಸದಸ್ಯರು ರಾಜ್ಯ ಸರ್ಕಾರದ ಶಿಕ್ಷಣ ನೀತಿಗೆ ವಿರುದ್ಧವಾಗಿ ಘೋಷಣೆಗಳನ್ನು ಕೂಗಿದರು. ರಾಜ್ಯದಾದ್ಯಂತ ಸುಮಾರು 40 ಸಾವಿರಕ್ಕೂ ಅಧಿಕ ಸರಕಾರಿ ಶಾಲೆಗಳನ್ನು ಮುಚ್ಚುವ ಉದ್ದೇಶದ ಸರ್ಕಾರದ ನಿರ್ಧಾರವು ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳ ಶಿಕ್ಷಣ ಹಕ್ಕಿಗೆ ಧಕ್ಕೆ ತರುತ್ತದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: National Herald Case: ಸೋನಿಯಾಗಾಂಧಿ, ರಾಹುಲ್ಗೆ ತಾತ್ಕಾಲಿಕ ರಿಲೀಫ್
ರಾಜ್ಯ ಸರ್ಕಾರ ಜಾರಿಗೆ ತಂದಿರುವ ‘ಕೆಪಿಎಸ್ ಮ್ಯಾಗ್ನೆಟ್’ (KPS Magnet) ನೀತಿಯು ಸರಕಾರಿ ಶಾಲೆಗಳ ಅಸ್ತಿತ್ವಕ್ಕೆ ಅಪಾಯಕಾರಿಯಾಗಿದ್ದು, ವಿದ್ಯಾರ್ಥಿಗಳನ್ನು ಖಾಸಗಿ ಶಾಲೆಗಳತ್ತ ಒತ್ತಾಯಿಸುವ ಕ್ರಮವಾಗಿದೆ ಎಂದು ಎಐಡಿಎಸ್ಒ ನಾಯಕರು ಆರೋಪಿಸಿದರು. ಈ ನೀತಿಯನ್ನು ಕೂಡಲೇ ಹಿಂಪಡೆಯಬೇಕು ಮತ್ತು ಎಲ್ಲ ಸರಕಾರಿ ಶಾಲೆಗಳನ್ನು ಉಳಿಸಿ, ಅವುಗಳಿಗೆ ಅಗತ್ಯ ಮೂಲಸೌಕರ್ಯ, ಶಿಕ್ಷಕರು ಮತ್ತು ಗುಣಮಟ್ಟದ ಶಿಕ್ಷಣ ಒದಗಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯ ವೇಳೆ ಮಾತನಾಡಿದ ಸಂಘಟನೆಯ ಮುಖಂಡರು, ಶಿಕ್ಷಣವನ್ನು ವ್ಯಾಪಾರೀಕರಣ ಮಾಡುವ ಯಾವುದೇ ಪ್ರಯತ್ನವನ್ನು ವಿದ್ಯಾರ್ಥಿಗಳು ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಸರ್ಕಾರ ತನ್ನ ನಿರ್ಧಾರವನ್ನು ಮರುಪರಿಶೀಲಿಸದಿದ್ದಲ್ಲಿ ರಾಜ್ಯವ್ಯಾಪಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಗಾಯಕ ಮ್ಯೂಸಿಕ್ ಮೈಲಾರಿ ಸೇರಿ ನಾಲ್ವರ ವಿರುದ್ಧ ಪೋಕ್ಸೋ ಕೇಸ್..!
ಪ್ರತಿಭಟನೆಯಲ್ಲಿ ನೂರಾರು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದು, ಶಾಂತಿಯುತವಾಗಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯ ಹಿನ್ನೆಲೆಯಲ್ಲಿ ಚನ್ನಮ್ಮ ವೃತ್ತದ ಸುತ್ತಮುತ್ತ ಕೆಲ ಕಾಲ ವಾಹನ ಸಂಚಾರದಲ್ಲಿ ಅಡಚಣೆ ಉಂಟಾಯಿತು.






















