ಬೆಳಗಾವಿ (ಸುವರ್ಣಸೌಧ): ರಾಜ್ಯದ ಇತರೆ ಜಿಲ್ಲೆಗಳಿಗಿಂತ ಕರಾವಳಿ ಪ್ರದೇಶಗಳು ಭೌಗೋಳಿಕವಾಗಿ ವೈಶಿಷ್ಟ್ಯ ಹೊಂದಿರುವ ಹಿನ್ನೆಲೆಯಲ್ಲಿ, ಈ ಜಿಲ್ಲೆಗಳಿಗೆ ಅನ್ವಯವಾಗುವಂತೆ ಏಕ/ಬಹು ನಿವೇಶನ ವಿನ್ಯಾಸ ಅನುಮೋದನೆಗೆ ವಿಶೇಷ ಸೇವೆಗಳನ್ನು ಕಲ್ಪಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ವಿಧಾನ ಪರಿಷತ್‌ನಲ್ಲಿ ತಿಳಿಸಿದರು.
ಚಳಿಗಾಲದ ಅಧಿವೇಶನದಲ್ಲಿ ಸದಸ್ಯ ಮಂಜುನಾಥ ಭಂಡಾರಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕರಾವಳಿ ಜಿಲ್ಲೆಗಳಲ್ಲಿ ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಗೆ ಒಳಪಡುವುದಿಲ್ಲದ ಗ್ರಾಮ ಪಂಚಾಯಿತಿ ವ್ಯಾಪ್ತಿಯ 1 ಎಕರೆ ಒಳಗಿನ ಭೂಮಿಗೆ ಅನುಮೋದನೆ ನೀಡುವ ಕುರಿತಂತೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಅಧಿಕಾರ ವಹಿಸಲಾಗುತ್ತದೆ: ಸಹಾಯಕ ನಿರ್ದೇಶಕರ ಕಛೇರಿ ಮತ್ತು ಹತ್ತಿರದ ನಗರ/ಗ್ರಾಮಾಂತರ ಯೋಜನಾ ಪ್ರಾಧಿಕಾರಗಳ ಅಧಿಕಾರಿಗಳಿಗೆ ತಾಂತ್ರಿಕ ಅನುಮೋದನೆ ನೀಡುವ ಅಧಿಕಾರ ಪ್ರತ್ಯಾಯೋಜಿಸಲಾಗಿದೆ. ತಾಲ್ಲೂಕು ಪಂಚಾಯತ್ ಕಚೇರಿಯಲ್ಲಿಯೇ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಅಧಿಕಾರಿಗಳು ನೇರ ಸೇವೆ ನೀಡುವಂತೆ ವ್ಯವಸ್ಥೆ ಮಾಡಲಾಗಿದೆ.
ಪಾರದರ್ಶಕತೆಗಾಗಿ ಯೂನಿಫೈಡ್ ಡಿಜಿಟಲ್ ವ್ಯವಸ್ಥೆ: ಯೂನಿಫೈಡ್ ಲ್ಯಾಂಡ್ ಮ್ಯಾನೇಜ್ಮೆಂಟ್ ಸಿಸ್ಟಮ್ (ULMS) ಅನ್ನು ಸೆಂಟರ್ ಫಾರ್ ಇ-ಗವರ್ನೆನ್ಸ್ ಮೂಲಕ ಅಭಿವೃದ್ಧಿಪಡಿಸಲಾಗುತ್ತಿದೆ. ಇದು ಜಾರಿಗೆ ಬಂದ ಬಳಿಕ ನಿವೇಶನ ವಿನ್ಯಾಸ ಅನುಮೋದನೆ ರಾಜ್ಯಪಾಲಿತ ಏಕೀಕೃತ ನಿಯಮಗಳಂತೆ ಪಾರದರ್ಶಕವಾಗಿ, ಸಮಯಕ್ಕೆ ಅನುಮೋದನೆ ಸಾರ್ವಜನಿಕರಿಗೆ ಜನ ಸ್ನೇಹಿ ಸೇವೆ ಲಭ್ಯವಾಗಲಿದೆ.
ಸಚಿವರು ಹೆಚ್ಚಿನ ವಿವರ ನೀಡಿ, ಕರಾವಳಿ ಜಿಲ್ಲೆಗಳ ಭೂಸ್ಥಿತಿ ಮತ್ತು ಯೋಜನಾ ವ್ಯಕ್ತಿತ್ವಕ್ಕೆ ಅನುಗುಣವಾಗಿ ಈ ವಿಶೇಷ ಸೇವೆ ಮೂಲಕ ಜನರಿಗೆ ಸರಳ, ತ್ವರಿತ ಮತ್ತು ಸ್ಪಷ್ಟ ನಿವೇಶನ ಅನುಮೋದನೆ ಸಿಗಲಿದೆ ಎಂದರು.




















