ಬೆಳಗಾವಿ (ಸುವರ್ಣಸೌಧ): ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತಂತೆ ರಾಜಕೀಯ ವಲಯದಲ್ಲಿ ಚರ್ಚೆಗಳು ಜೋರಾಗಿರುವ ನಡುವೆಯೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಮಾನ ಕುರಿತು ಸ್ಪಷ್ಟ ಹಾಗೂ ಖಡಕ್ ಸಂದೇಶ ನೀಡಿದ್ದಾರೆ. ವಿಧಾನಸಭೆಯ ಚಳಿಗಾಲ ಅಧಿವೇಶನದಲ್ಲಿ ಮಾತನಾಡಿದ ಅವರು, “ಇದು ನನ್ನ ಸರ್ಕಾರವಲ್ಲ, ನಮ್ಮ ಸರ್ಕಾರ. ಈಗಲೂ ನಾನೇ ಮುಖ್ಯಮಂತ್ರಿ. ಹೈಕಮಾಂಡ್ ಹೇಳುವ ತನಕವೂ ನಾನೇ ಮುಖ್ಯಮಂತ್ರಿ” ಎಂದು ಘೋಷಿಸಿದರು.
ವಿರೋಧ ಪಕ್ಷಗಳ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಿಎಂ: “ವಿರೋಧ ಪಕ್ಷದವರಿರುವುದೇ ಉರಿಯುವುದರ ಮೇಲೆ ಉಪ್ಪು ಸುರಿಯಲು. ಅವರು ಏನೇ ಪ್ರಚೋದನೆ ಮಾಡಿದರೂ ನಮ್ಮ ಶಾಸಕರಾರೂ ಅದಕ್ಕೆ ಒಳಗಾಗುವುದಿಲ್ಲ” ಎಂದು ಹೇಳಿದರು. ಜನರು ಐದು ವರ್ಷ ಆಡಳಿತ ನಡೆಸುವಂತೆ ಆಶೀರ್ವಾದ ಮಾಡಿ ಕಳುಹಿಸಿರುವುದಾಗಿ ತಿಳಿಸಿದ ಅವರು, 140 ಶಾಸಕರು ನಮ್ಮೊಂದಿಗಿದ್ದಾರೆ. ಇದರಲ್ಲಿ ವಿರೋಧ ಪಕ್ಷದವರು ಹುಳಿ ಹಿಂಡುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ: ಸೋನಿಯಾ – ರಾಹುಲ್ ಜತೆ ಡಿ.ಕೆ. ಶಿವಕುಮಾರ್ ಚರ್ಚೆ
2023ರಲ್ಲಿ ಜನರು ಕಾಂಗ್ರೆಸ್ ಪಕ್ಷಕ್ಕೆ ನೀಡಿದ ಆಶೀರ್ವಾದವನ್ನು ಸ್ಮರಿಸಿದ ಸಿದ್ದರಾಮಯ್ಯ: “2028ರಲ್ಲಿಯೂ ನಮ್ಮ ಸರ್ಕಾರವೇ ಅಧಿಕಾರಕ್ಕೆ ಬರಲಿದೆ. ಜನರ ನಾಡಿಮಿಡಿತ ಸರ್ಕಾರಕ್ಕೆ ತಿಳಿದಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕರ್ನಾಟಕದಲ್ಲಿ ಬಿಜೆಪಿಗೆ ಜನಾದೇಶ ಎಂದಿಗೂ ದೊರೆತಿಲ್ಲ ಎಂದು ಹೇಳಿದ ಅವರು, “2008 ಮತ್ತು 2018ರಲ್ಲಿ ಬಿಜೆಪಿ ಆಪರೇಷನ್ ಕಮಲ ಮಾಡಿ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿದೆ. ಜನರ ಆಶೀರ್ವಾದದಿಂದ ಬಿಜೆಪಿ ಅಧಿಕಾರಕ್ಕೆ ಬಂದಿಲ್ಲ” ಎಂದು ಟೀಕಿಸಿದರು.
2019ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬಾರದೆಂಬ ಉದ್ದೇಶದಿಂದ ಜೆಡಿಎಸ್ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿತ್ತು ಆದರೆ ಇಂದು ಬಿಜೆಪಿಯವರು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಉದ್ದೇಶವೇನು?” ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ದಿಲ್ಲೀಲಿ ವರಿಷ್ಠರ ಭೇಟಿಯಾಗದೆ ಸಿದ್ದು ರಿಟರ್ನ್
ಪಕ್ಷದ ಒಳನಿಲುವಿನ ಕುರಿತು ಮಾತನಾಡಿದ ಸಿದ್ದರಾಮಯ್ಯ: ನಮ್ಮ ಪಕ್ಷದಲ್ಲಿ ಹೈಕಮಾಂಡ್ ಮಾತು ಅಂತಿಮ. ಆದರೆ ಬಿಜೆಪಿಯಲ್ಲಿ ಅಧ್ಯಕ್ಷ ಆಯ್ಕೆಗೂ ಒಮ್ಮತವಿಲ್ಲ. ಅವರಿಗೆ ಅಸೂಯೆ ಕಾಡುತ್ತಿದೆ” ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್ ಸರ್ಕಾರ ಐದು ವರ್ಷ ಸುಭದ್ರ ಆಡಳಿತ ನೀಡುವುದಾಗಿ ಭರವಸೆ ನೀಡಿದ ಅವರು, ಮತ್ತೆ ಜನಾದೇಶ ಪಡೆದು ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದರು.
ಅಂತಿಮವಾಗಿ ಕನಕದಾಸರ ವಾಕ್ಯವನ್ನು ಉಲ್ಲೇಖಿಸಿದ ಅವರು ‘ನಾನು’ ಹೋದರೆ ಹೋದೇನು ಅಂತ ಕನಕದಾಸರು ಹೇಳಿದ್ದಾರೆ. ಇದು ನನ್ನ ಸರ್ಕಾರವಲ್ಲ, ನಮ್ಮ ಸರ್ಕಾರ” ಎಂದು ಹೇಳುವ ಮೂಲಕ ತಮ್ಮ ರಾಜಕೀಯ ನಿಲುವು ಮತ್ತು ಅಧಿಕಾರದ ದೃಢತೆಯನ್ನು ಪುನರುಚ್ಚರಿಸಿದರು.






















