ಬಿಜೆಪಿ ದ್ವೇಷ ರಾಜಕಾರಣ ನ್ಯಾಯದ ಮುಂದೆ ಸೋಲು ಕಂಡಿದೆ

0
5

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ನ್ಯಾಯಾಲಯದ ತೀರ್ಪು ಸತ್ಯಕ್ಕೆ ಜಯ – ಸುವರ್ಣಸೌಧದಲ್ಲಿ ಪ್ರತಿಭಟನೆ

ಬೆಳಗಾವಿ: ಬಿಜೆಪಿಯವರ ದ್ವೇಷ ರಾಜಕಾರಣ ನ್ಯಾಯ ದೇವತೆಯ ಎದುರು ಸೋತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರವಾಗಿ ವಾಗ್ದಾಳಿ ನಡೆಸಿದರು. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗಳ ಮೂಲಕ ನಡೆಸಲಾಗಿದ್ದ ರಾಜಕೀಯ ದ್ವೇಷವನ್ನು ಖಂಡಿಸಿ, ಸುವರ್ಣಸೌಧದ ಗಾಂಧಿ ಪ್ರತಿಮೆ ಬಳಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಕೇಂದ್ರ ಅಥವಾ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿರುವ ಎಲ್ಲ ಕಡೆ ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿ, ಅವರನ್ನು ಅಪರಾಧಿಗಳಂತೆ ಬಿಂಬಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಅಸತ್ಯ ಆರೋಪಗಳನ್ನು ಮುನ್ನಲೆಗೆ ತಂದು, ನ್ಯಾಯಾಲಯದ ಮೆಟ್ಟಿಲು ಏರಿಸುವ ಮೂಲಕ ರಾಜಕೀಯ ಸ್ವಾರ್ಥ ಸಾಧಿಸಲು ಬಿಜೆಪಿ ಮುಂದಾಗಿದೆ. ಆದರೆ ನ್ಯಾಯಾಲಯ ಈ ಪ್ರಕರಣದಲ್ಲಿ ಸತ್ಯವನ್ನು ಎತ್ತಿಹಿಡಿದಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ ಹಣ ವಿಳಂಬ: ಸದನದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿಷಾದ

ದೇಶದ ಸಮಸ್ಯೆಗಳಿಂದ ಜನರ ಗಮನ ಬೇರೆಡೆ ಸೆಳೆಯುವ ಯತ್ನ: ಇಂದು ದೇಶದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಹಣದುಬ್ಬರ ಹೆಚ್ಚಾಗಿದೆ, ನಿರುದ್ಯೋಗ ಸಮಸ್ಯೆ ಗಂಭೀರವಾಗಿದೆ. ಜನಸಾಮಾನ್ಯರ ಮೇಲೆ ತೆರಿಗೆಗಳ ಭಾರ ಹೆಚ್ಚಿಸಲಾಗಿದೆ. ಭಾರತವನ್ನು ಸಾಲಗಾರ ರಾಷ್ಟ್ರವನ್ನಾಗಿ ಮಾಡಲಾಗಿದೆ ಎಂದು ಆರೋಪಿಸಿದರು.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಆಡಳಿತ ಅವಧಿಯಲ್ಲಿ ದೇಶದ ಒಟ್ಟು ಸಾಲ ₹53.11 ಲಕ್ಷ ಕೋಟಿ ಇತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ ಕಳೆದ 11 ವರ್ಷಗಳಲ್ಲಿ ದೇಶದ ಸಾಲ ₹148 ಲಕ್ಷ ಕೋಟಿ ಹೆಚ್ಚಿದ್ದು, ಒಟ್ಟು ಸಾಲ ₹2 ಲಕ್ಷ ಕೋಟಿಗೂ ಮೀರಿದೆ. ಈ ವೈಫಲ್ಯಗಳನ್ನು ಮರೆಮಾಚಲು ಬಿಜೆಪಿ ಇಂತಹ ಸುಳ್ಳು ಪ್ರಕರಣಗಳನ್ನು ಮುಂದಿಟ್ಟುಕೊಳ್ಳುತ್ತಿದೆ ಎಂದು ಹೇಳಿದರು.

ಬಿಜೆಪಿ ನೀಡಿದ ಭರವಸೆಗಳು ಈಡೇರಿಲ್ಲ: ಪ್ರಧಾನಿ ಮೋದಿ ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದರು. ವಿದೇಶದಲ್ಲಿನ ಕಪ್ಪುಹಣವನ್ನು ತಂದು ಪ್ರತಿ ಭಾರತೀಯನ ಖಾತೆಗೆ ₹15 ಲಕ್ಷ ಜಮೆ ಮಾಡುವುದಾಗಿ ಹೇಳಿದರು. ಆದರೆ ಈ ಭರವಸೆಗಳಲ್ಲಿ ಒಂದನ್ನೂ ಈಡೇರಿಸಲಿಲ್ಲ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿವೆ. ಈ ವೈಫಲ್ಯಗಳಿಂದ ಜನರ ಗಮನ ಬೇರೆಡೆ ಸೆಳೆಯಲು ದ್ವೇಷ ರಾಜಕಾರಣ ನಡೆಸಲಾಗುತ್ತಿದೆ ಎಂದು ಟೀಕಿಸಿದರು.

ಇದನ್ನೂ ಓದಿ: ಮಹಾತ್ಮ ಗಾಂಧೀಜಿ ಹೆಸರನ್ನು ಅಳಿಸಿ ಗ್ರಾಮೀಣರ ಹಕ್ಕು ಕಸಿಯುವ VB-G RAM G ಬಿಲ್: ಸಚಿವ ಎಂ.ಬಿ. ಪಾಟೀಲ್ ಕಿಡಿ

ನ್ಯಾಷನಲ್ ಹೆರಾಲ್ಡ್ ಕಾಂಗ್ರೆಸ್‌ನ ಐತಿಹಾಸಿಕ ಆಸ್ತಿ: 1937ರಲ್ಲಿ ಜವಾಹರಲಾಲ್ ನೆಹರು ಅವರು ಸ್ವಾತಂತ್ರ್ಯ ಹೋರಾಟದ ಜಾಗೃತಿ ಮೂಡಿಸಲು ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಆರಂಭಿಸಿದರು. ಇದು ಕಾಂಗ್ರೆಸ್ ಪಕ್ಷದ ಆಸ್ತಿ. ನಂತರ ಯಂಗ್ ಇಂಡಿಯನ್ ಸಂಸ್ಥೆ ಈ ಪತ್ರಿಕೆಯನ್ನು ವಹಿಸಿಕೊಂಡಿತು. ಈ ಸಂಬಂಧ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮೋತಿಲಾಲ್ ವೋರಾ, ಆಸ್ಕರ್ ಫರ್ನಾಂಡಿಸ್ ವಿರುದ್ಧ ದಾಖಲಿಸಲಾದ ಪ್ರಕರಣವನ್ನು ನ್ಯಾಯಾಲಯ ತಿರಸ್ಕರಿಸಿದೆ. ಇ.ಡಿ ಸಲ್ಲಿಸಿದ್ದ ಆರೋಪ ಪಟ್ಟಿಯನ್ನು ನ್ಯಾಯಾಲಯ ವಜಾಗೊಳಿಸಿರುವುದು ಸತ್ಯಕ್ಕೆ ದೊರೆತ ಜಯ ಎಂದು ಸಿದ್ದರಾಮಯ್ಯ ಹೇಳಿದರು.

ಹೆಸರು ಬದಲಾವಣೆ ಮಾತ್ರ – ಜನಪರ ಕೆಲಸ ಇಲ್ಲ: ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನು ಬದಲಿಸಿ VB-G RAM G ಎಂದು ಮಾಡಲಾಗಿದೆ. ರಾಜಭವನವನ್ನು ಲೋಕಭವನ ಎಂದು ಮರುನಾಮಕರಣ ಮಾಡಲಾಗಿದೆ. ಇದು ಸರ್ಕಾರದ ಆಸ್ತಿಯಾಗಿದ್ದು, ಹೆಸರು ಬದಲಿಸುವುದೇ ಸಾಧನೆ ಅಲ್ಲ. ಬಡವರಿಗೆ ಅನುಕೂಲವಾಗುವ ಕೆಲಸಗಳನ್ನು ಕೇಂದ್ರ ಸರ್ಕಾರ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಹೈಕಮಾಂಡ್ ಸೂಚಿಸುವವರೆಗೂ ನಾನೇ ಮುಖ್ಯಮಂತ್ರಿ

ಮಹಾತ್ಮ ಗಾಂಧಿ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳನ್ನು ಬಿಜೆಪಿ ಇಷ್ಟಪಡುವುದಿಲ್ಲ. ಬಡವರು, ದೀನದಲಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರ ಪರ ಯಾವುದೇ ಯೋಜನೆಗಳಿಗೆ ಬಿಜೆಪಿ ಸಹಮತಿ ನೀಡುವುದಿಲ್ಲ. ಕರ್ನಾಟಕದಲ್ಲಿ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸಿದ ಬಿಜೆಪಿ, ಈಗ ಅದೇ ಮಾದರಿಯ ಯೋಜನೆಗಳನ್ನು ದೇಶದಾದ್ಯಂತ ಅನುಸರಿಸುತ್ತಿದೆ ಎಂದು ಹೇಳಿದರು.

ಹೋರಾಟ ಮುಂದುವರಿಕೆ: ನ್ಯಾಯಾಲಯದ ತೀರ್ಪಿನ ಬೆನ್ನಲ್ಲೇ ಸದನದ ಒಳಗೂ ಹೊರಗೂ ಪ್ರತಿಭಟನೆ ಮುಂದುವರಿಸಲಾಗುವುದು. ರಾಜ್ಯ ಹಾಗೂ ದೇಶದಾದ್ಯಂತ ಬಿಜೆಪಿ ಕುತಂತ್ರ ನೀತಿಗಳ ವಿರುದ್ಧ ಹೋರಾಟ ನಡೆಸಲಾಗುವುದು. ಕಾಂಗ್ರೆಸ್ ಎಂದಿಗೂ ಕೈಕಟ್ಟಿ ಕುಳಿತುಕೊಳ್ಳುವ ಪಕ್ಷವಲ್ಲ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ಕಾಂಗ್ರೆಸ್. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದ ಬಿಜೆಪಿ ಇಂದು ದ್ವೇಷ ರಾಜಕಾರಣದಲ್ಲಿ ತೊಡಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

Previous articleಬಾಗಲಕೋಟೆ ಜಿಲ್ಲಾಡಳಿತ ಭವನಕ್ಕೆ ಬಾಂಬ್ ಬೆದರಿಕೆ ಕರೆ