ಬೆಳಗಾವಿ (ಸುವರ್ಣಸೌಧ): ಉತ್ತರ ಕನ್ನಡ ಜಿಲ್ಲೆಯ ಶರಾವತಿ ಪಂಪ್ಡ್ ಸ್ಟೋರೇಜ್ ಜಲವಿದ್ಯುತ್ ಯೋಜನೆಗೆ ಸಂಬಂಧಿಸಿದಂತೆ ಪರಿಸರ ಹಾನಿ ಕುರಿತ ಆರೋಪಗಳನ್ನು ತಳ್ಳಿ ಹಾಕಿ, ಈ ಯೋಜನೆ ಸಂಪೂರ್ಣವಾಗಿ ಪರಿಸರ ಸ್ನೇಹಿ ಹಾಗೂ ತಾಂತ್ರಿಕವಾಗಿ ಸುರಕ್ಷಿತವಾಗಿದೆ ಎಂದು ಇಂಧನ ಸಚಿವ ಕೆ. ಜೆ. ಜಾರ್ಜ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ಶಾಸಕ ದಿನಕರ್ ಕೇಶವ್ ಶೆಟ್ಟಿ ಅವರ ಪ್ರಶ್ನೆಗೆ ಉತ್ತರ ನೀಡಿದ ಜಾರ್ಜ್ ಅವರು, ಈ ಯೋಜನೆಯ ಮೂಲಕ 2,000 ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
“ಪರಿಸರಕ್ಕೆ ಹಾನಿ ಎಂಬುದು ತಪ್ಪು ಕಲ್ಪನೆ” : ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಕೆಲವು ಪರಿಸರವಾದಿಗಳು ಮತ್ತು ಸ್ಥಳೀಯರಲ್ಲಿ ಮಾಹಿತಿ ಕೊರತೆಯಿಂದ ತಪ್ಪು ಕಲ್ಪನೆ ಉಂಟಾಗಿದೆ ಎಂದು ಸಚಿವರು ಹೇಳಿದರು. ಯಾರು ಆಕ್ಷೇಪಣೆ ವ್ಯಕ್ತಪಡಿಸಿದ್ದಾರೋ ಅವರ ಮಾತುಗಳನ್ನು ಗಂಭೀರವಾಗಿ ಪರಿಗಣಿಸಿದ್ದೇನೆ. ತಜ್ಞರು ಮತ್ತು ಅಧಿಕಾರಿಗಳಿಂದ ಪರಿಶೀಲನೆ ನಡೆಸಿ ವರದಿ ಪಡೆದುಕೊಂಡಿದ್ದೇನೆ. ಯಾವುದೇ ರೀತಿಯ ಪರಿಸರ ಹಾನಿ ಸಂಭವಿಸುವುದಿಲ್ಲ ಎಂಬುದು ದೃಢಪಟ್ಟಿದೆ,” ಎಂದು ಹೇಳಿದ್ದಾರೆ.
ಸುರಂಗ ಮಾರ್ಗವಿಲ್ಲ – ಪೈಪ್‌ಲೈನ್ ಮಾತ್ರ: ಹೊಸ ಯೋಜನೆಯಲ್ಲಿ ಸುರಂಗ ತೋಡುವುದಿಲ್ಲ, ಬದಲಿಗೆ ಪೈಪ್‌ಲೈನ್ ಅಳವಡಿಕೆ ಮಾಡುವ ಮೂಲಕ ನೀರಿನ ಹರಿವು ನಿಯಂತ್ರಿಸಲಾಗುತ್ತದೆ. ಈ ಕಾರ್ಯಕ್ಕಾಗಿ ಕೇವಲ 25 ಎಕರೆ ಭೂಮಿ ಮಾತ್ರ ಅಗತ್ಯವಿದ್ದು, ಕೆಲಸ ಮುಗಿದ ನಂತರ ಆ ಪ್ರದೇಶವನ್ನು ಮತ್ತೆ ಮರುಅರಣ್ಯೀಕರಣ ಮಾಡಿ ಮೂಲ ಸ್ಥಿತಿಗೆ ತರಲಾಗುವುದು ಎಂದು ಅವರು ಭರವಸೆ ನೀಡಿದರು.
1964ರ ಶರಾವತಿ ಯೋಜನೆಗೆ ಹೋಲಿಕೆ: 1964ರಲ್ಲಿ ನಿರ್ಮಿತವಾದ ಶರಾವತಿ ಜಲಾಶಯದಿಂದಲೇ 1 ಲಕ್ಷ ಹೆಕ್ಟೇರ್ ಪ್ರದೇಶ ಮುಳುಗಡೆಯಾಗಿದ್ದರೂ, ಇಂದು ವರಾಹಿ ಸೇರಿದಂತೆ 1,400 ಮೆ.ವ್ಯಾ. ವಿದ್ಯುತ್ ಉತ್ಪಾದನೆಯಾಗುತ್ತಿದೆ. ಹೊಸ ಪಂಪ್ಡ್ ಸ್ಟೋರೇಜ್ ಯೋಜನೆಯಲ್ಲಿ ಬಳಕೆಯಾದ ನೀರನ್ನೇ ಪುನಃ ಮೇಲಕ್ಕೆ ಪಂಪ್ ಮಾಡಿ, ಮತ್ತೊಮ್ಮೆ ವಿದ್ಯುತ್ ಉತ್ಪಾದನೆ ಮಾಡುವ ಸ್ವಚ್ಛ ಹಾಗೂ ಮರುಬಳಕೆ ಆಧಾರಿತ ತಂತ್ರಜ್ಞಾನ ಅನುಸರಿಸಲಾಗುತ್ತಿದೆ.
ನವೀಕರಿಸಬಹುದಾದ ಇಂಧನದಲ್ಲಿ ರಾಜ್ಯದ ಪ್ರಗತಿ: ಸೌರ ಮತ್ತು ಪವನಶಕ್ತಿ ಕ್ಷೇತ್ರದಲ್ಲಿ ಕರ್ನಾಟಕ ಈಗಾಗಲೇ ದೇಶದಲ್ಲಿ ಮೂರನೇ ಸ್ಥಾನದಲ್ಲಿದ್ದು ಶೀಘ್ರದಲ್ಲೇ ಮೊದಲ ಸ್ಥಾನ ಗಿಟ್ಟಿಸುವ ವಿಶ್ವಾಸವಿದೆ ಎಂದು ಜಾರ್ಜ್ ಹೇಳಿದರು. ರಾಜ್ಯದಲ್ಲಿ ಪ್ರತಿವರ್ಷವೂ ವಿದ್ಯುತ್ ಬೇಡಿಕೆ ಹೆಚ್ಚುತ್ತಿದ್ದು, ಈ ವರ್ಷ ಮಾತ್ರವೇ ಕಳೆದ ವರ್ಷಕ್ಕಿಂತ 1,000 ಮೆ.ವ್ಯಾ. ಹೆಚ್ಚು ವಿದ್ಯುತ್ ಅಗತ್ಯವಿದೆ. ಆದರೂ ಸರ್ಕಾರ ಪವರ್ ಕಟ್ ಇಲ್ಲದೆ, ವಿಶೇಷವಾಗಿ ಕೃಷಿ ಪಂಪ್‌ಸೆಟ್‌ಗಳಿಗೆ ನಿರಂತರ ವಿದ್ಯುತ್ ನೀಡುತ್ತಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.






















