ಬೆಳಗಾವಿ: ಎಂಇಎಸ್ ಮುಖಂಡ ಶುಭಂ ಶೆಳಕೆ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಮಾಳಮಾರುತಿ ಪೊಲೀಸ್ ಠಾಣೆ ಸಿಪಿಐ ಜೆ.ಎಂ. ಕಾಲಿಮಿರ್ಚಿಗೆ ಇದೀಗ ವರ್ಗಾವಣೆಯ ಶಿಕ್ಷೆ ನೀಡಿದೆ. ಆದರೆ, ಹುದ್ದೆ ತೋರಿಸಿಲ್ಲ.
ನವಂಬರ್ ಒಂದರ ಶನಿವಾರ ಕರ್ನಾಟಕ ರಾಜ್ಯೋತ್ಸವ ನಡೆದಿತ್ತು. ಬೆಳಗಾವಿಯಲ್ಲಿ ರಾಜ್ಯೋತ್ಸವಕ್ಕೆ ವಿರೋಧವಾಗಿ ಎಂಇಎಸ್ ಕರಾಳ ದಿನಾಚರಣೆಯನ್ನು ಆಚರಿಸುತ್ತಾ ಬರುತ್ತಿದೆ. ಜಿಲ್ಲಾಡಳಿತ ಅನುಮತಿ ನೀಡದಿದ್ದರೂ ರಾಜ್ಯೋತ್ಸವಕ್ಕೆ ವಿರುದ್ಧವಾಗಿ ಎಂಇಎಸ್ ಕರಾಳ ದಿನ ಮೆರವಣಿಗೆ ಆರಂಭಕ್ಕೂ ಮೊದಲು ನಗರದ ಸಂಭಾಜಿ ಉದ್ಯಾನದಲ್ಲಿ ಶುಭಂ ಶೆಳಕೆ ಜೊತೆಗೆ ಸಿಪಿಐ ಕಾಲಿಮಿರ್ಚಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು.
ಈ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸಿಪಿಐ ಜೆ.ಎಂ. ಕಾಲಿಮಿರ್ಚಿ ವಿರುದ್ಧ ಕನ್ನಡಿಗರು ತೀವ್ರ ಆಕ್ರೋಶ ಹೊರಹಾಕಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ಮಾಳಮಾರುತಿ ಪೊಲೀಸ್ ಠಾಣೆ ಸಿಪಿಐ ಜೆ.ಎಂ. ಕಾಲಿಮಿರ್ಚಿ ಅವರನ್ನು ಹುದ್ದೆ ತೋರಿಸದೆ ಎತ್ತಂಗಡಿ ಮಾಡಿದೆ. ಇವರ ಜಾಗಕ್ಕೆ ಸಿಇಎನ್ ಠಾಣೆಯ ಇನ್ಸ್‌ಪೆಕ್ಟರ್ ಬಿ.ಆರ್. ಗಡ್ಡೆಕರ ನೇಮಕ ಮಾಡಲಾಗಿದೆ.

























