Home Advertisement
Home ನಮ್ಮ ಜಿಲ್ಲೆ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣ ‘ರೆಡ್ ಝೋನ್’ ಘೋಷಣೆ

ಸಾಂಬ್ರಾ ವಿಮಾನ ನಿಲ್ದಾಣ ‘ರೆಡ್ ಝೋನ್’ ಘೋಷಣೆ

0
25

ಬೆಳಗಾವಿ: ಇಸ್ರೇಲ್ ಇರಾನ್ ಅಮೆರಿಕ ನಡುವಿನ ಯುದ್ಧ ಪರಿಸ್ಥಿತಿಯಿಂದ ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಉದ್ವಿಗ್ನತೆ ಹಿನ್ನೆಲೆಯಲ್ಲಿ ದೇಶದ ಪ್ರಮುಖ ವಿಮಾನ ನಿಲ್ದಾಣಗಳ ಭದ್ರತೆ ಮತ್ತಷ್ಟು ಬಲಪಡಿಸಲಾಗುತ್ತಿದೆ.

ಇದರ ಭಾಗವಾಗಿ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣವನ್ನು ‘ರೆಡ್ ಝೋನ್’ ಎಂದು ಘೋಷಿಸಿ ಕಟ್ಟುನಿಟ್ಟಿನ ಭದ್ರತಾ ಕ್ರಮ ಜಾರಿಗೆ ತರಲಾಗಿದೆ. ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ ಮಾರ್ಗಸೂಚಿಯಂತೆ ಈ ಕ್ರಮ ಕೈಗೊಳ್ಳಲಾಗಿದ್ದು ಸಾಂಬ್ರಾ ವಿಮಾನ ನಿಲ್ದಾಣದ ಸುತ್ತ-ಮುತ್ತ 8 ಕಿಲೋಮೀಟರ್ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಡ್ರೋನ್ ಅಥವಾ ಅನ್‌ಮ್ಯಾನ್ಡ್ ಏರಿಯಲ್ ವಾಹನಗಳ ಹಾರಾಟ ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ.

ರೆಡ್ ಝೋನ್ ಮತ್ತು ಯೆಲ್ಲೋ ಝೋನ್ ವ್ಯಾಪ್ತಿಯಲ್ಲಿ ಅನುಮತಿ ಇಲ್ಲದೆ ಡ್ರೋನ್ ಹಾರಾಟ ನಡೆಸುವುದು ಕಾನೂನುಬಾಹಿರವಾಗಿದ್ದು ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧ ಬೆಳಗಾವಿ ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಪತ್ರಿಕಾ ಪ್ರಕಟಣೆ ಹೊರಡಿಸಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

ಪ್ರಸ್ತುತ ಜಾಗತಿಕ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ವಿಮಾನ ನಿಲ್ದಾಣದ ಭದ್ರತಾ ವ್ಯವಸ್ಥೆ ಮತ್ತಷ್ಟು ಬಲಪಡಿಸಲಾಗಿದ್ದು ಸಾರ್ವಜನಿಕರು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಪೊಲೀಸ್ ಇಲಾಖೆಗೆ ಸಹಕರಿಸಬೇಕು ಎಂದು ಮನವಿ ಮಾಡಲಾಗಿದೆ.