ಬೆಳಗಾವಿ: ನೇಕಾರರ ಹತ್ತು ಅಶ್ವಶಕ್ತಿಯವರೆಗಿನ ವಿದ್ಯುತ್ ಮಗ್ಗಗಳ ಏಳು ತಿಂಗಳ ಬಾಕಿ ವಿದ್ಯುತ್ ಶುಲ್ಕ ಮನ್ನಾ ಮಾಡುವ ಬೇಡಿಕೆಯ ಬಗ್ಗೆ ಸರ್ಕಾರ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದೆ.
ಶುಕ್ರವಾರ ವಿಧಾನಸಭೆಯಲ್ಲಿ ಶಶಿಕಲಾ ಜೊಲ್ಲೆ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜವಳಿ ಸಚಿವ ಶಿವಾನಂದ ಪಾಟೀಲ, `ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸೋಣ’ ಎನ್ನುವ ಮೂಲಕ ನೇಕಾರರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿದರು.
ನೇಕಾರರ ಮಗ್ಗಗಳಿಗೆ 10 ಎಚ್‌ಪಿವರೆಗೆ ಉಚಿತ ವಿದ್ಯುತ್ ನೀಡುವುದಾಗಿ ಸಿದ್ದರಾಮಯ್ಯ ಸರ್ಕಾರ ಘೋಷಿಸಿದ್ದು, ನವೆಂಬರ್ ತಿಂಗಳಿಂದ ಇದು ಜಾರಿಗೆ ಬಂದಿದೆ. ಆದರೆ ಹಿಂದಿನ ಬಾಕಿ ವಿದ್ಯುತ್ ಶುಲ್ಕವನ್ನು ನೇಕಾರರು ಕಟ್ಟಬೇಕಾಗಿದೆ. ಇದು ಕೇವಲ 20 ಕೋಟಿಯಷ್ಟಿದ್ದು, ಸರ್ಕಾರ 2023ರಿಂದ ಅನ್ವಯವಾಗುವಂತೆಯೇ ಯೋಜನೆ ಜಾರಿಗೊಳಿಸಿ, ಹಿಂಬಾಕಿಯನ್ನು ಸರ್ಕಾರವೇ ಕಟ್ಟಬೇಕು ಎಂದು ಶಶಿಕಲಾ ಜೊಲ್ಲೆ ಹಾಗೂ ಸಿದ್ದು ಸವದಿ ಒತ್ತಾಯಿಸಿದರು.
ಇದನ್ನೂ ಓದಿ: ಸದನದಲ್ಲಿ ಗೃಹಲಕ್ಷ್ಮೀ ಗದ್ದಲ: ಸಿಎಂ ವಿರುದ್ಧ ಬಿಜೆಪಿ ಚಾಟಿ
ಆಗ ಉತ್ತರಿಸಿದ ಶಿವಾನಂದ ಪಾಟೀಲ, `10 ಎಚ್‌ಪಿವರೆಗಿನ ಉಚಿತ ವಿದ್ಯುತ್ ಸೌಲಭ್ಯದಿಂದಾಗಿ ಸರ್ಕಾರಕ್ಕೆ 120 ಕೋಟಿಯಷ್ಟು ಹೊರೆ ಬೀಳುತ್ತಿದೆ; ಬಿಜೆಪಿ ಸರ್ಕಾರ ಇದ್ದಾಗ ನೇಕಾರರ ಬೇಡಿಕೆಯ ಬಗ್ಗೆ ಸ್ಪಂದನೆಯನ್ನೇ ತೋರಿರಲಿಲ್ಲ’ ಎಂದರು.
`ನಾವು ಉಚಿತ ವಿದ್ಯುತ್ ಘೋಷಿಸಿ ಜಾರಿಗೆ ತಂದಿದ್ದರೆ, ನೀವು 2023ರಿಂದ ಅನ್ವಯವಾಗುವಂತೆಯೇ ಜಾರಿಗೊಳಿಸಿ ಎನ್ನುತ್ತಿದ್ದೀರಿ. ನಿಮ್ಮ ಸರ್ಕಾರ ಇದ್ದಾಗ ಕಡೆಗಣಿಸಿದ್ದಿರಿ. 2023ರಿಂದ ಇದುವರೆಗಿನ ಬಿಲ್ ಬಾಕಿ ಮನ್ನಾ ಸಾಧ್ಯವಿಲ್ಲ. ಆದರೆ ಬಜೆಟ್ ಘೋಷಣೆ ಮತ್ತು ಜಾರಿಯ ನಡುವೆ ಇರುವ ಆರೇಳು ತಿಂಗಳ ಅಂತರದ ಬಾಕಿಯನ್ನು ಸರ್ಕಾರ ಕಟ್ಟುವ ಬಗ್ಗೆ ಸಿಎಂ ಜೊತೆ ಚರ್ಚಿಸೋಣ. ಪರಿಹಾರ ಕಂಡುಕೊಳ್ಳೋಣ’ ಎಂದು ಭರವಸೆ ನೀಡಿದರು.









