ಬೆಳಗಾವಿ: ರಾಜ್ಯ ಸರ್ಕಾರ ಟಿಪ್ಪು ಜಯಂತಿಯನ್ನಾದರೂ ಮಾಡಲಿ, ಬಿನ್ ಲಾಡೆನ್ ಜಯಂತಿಯನ್ನಾದರೂ ಮಾಡಲಿ ಜನರಿಗೆ ಇದು ಯಾವ ರೀತಿ ಕೆಟ್ಟ ಸರ್ಕಾರ ಎಂಬುದು ಮನವರಿಕೆಯಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬೆಳಗಾವಿಯ ಸುವರ್ಣಸೌಧದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸರ್ಕಾರ ಯಾವ ರೀತಿ ಕೆಲಸ ಮಾಡುತ್ತಿದೆ, ಯಾವ ರೀತಿ ವೈಫಲ್ಯವಾಗಿದೆ ಎಂಬುದು ಜನರಿಗೆ ಗೊತ್ತಾಗಿದೆ, ಅತಿವೃಷ್ಟಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಎನ್‌ಡಿಆರ್‌ಎಫ್‌ನ 6 ಸಾವಿರ ಕೋಟಿ ರೂ. ಪರಿಹಾರ ನೀಡಿದೆ, ಆದರೂ ಕೇಂದ್ರದ ಮೇಲೆ ಬೊಟ್ಟು ಮಾಡುವುದನ್ನು ಬಿಡುತ್ತಿಲ್ಲ, ಹೀಗಾಗಿ ರೈತರ ಬಗ್ಗೆ ಮಾತನಾಡಲು ಈ ಸರ್ಕಾರಕ್ಕೆ ಯಾವ ನೈತಿಕತೆಯೂ ಇಲ್ಲ ಎಂದರು.
ಸದನದಲ್ಲಿಯೇ ಉತ್ತರ: ಟಿಪ್ಪು ಜಯಂತಿ ಆಚರಣೆ ವಿಷಯ ವಿಧಾನಸಭೆಯಲ್ಲಿ ಪ್ರಸ್ತಾಪವಾಗಿದೆ, ಇದಕ್ಕೆ ಸದನದಲ್ಲಿಯೇ ಸರ್ಕಾರ ಉತ್ತರಿಸಲಿದೆ ಎಂದು ಸಚಿವ ಎಚ್.ಕೆ. ಪಾಟೀಲ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಪ್ಪು ಜಯಂತಿ ಆಚರಣೆಗೆ ಸಂಬಂಧಿಸಿದಂತೆ ಶಾಸಕ ಕಾಶಪ್ಪನವರ ವಿಷಯ ಪ್ರಸ್ತಾಪಿಸಿದ್ದಾರೆ, ಹೀಗಾಗಿ ಸರ್ಕಾರ ಈ ವಿಷಯಕ್ಕೆ ಸಂಬಂಧಿಸಿದಂತೆ ಸದನದಲ್ಲಿಯೇ ಉತ್ತರ ನೀಡಲಿದೆ ಎಂದರು.




















