ಸದನದಲ್ಲಿ ಮಾತಿನ ಸಮರ, ಗದ್ದಲ–ಧರಣಿ; ಆಡಳಿತ–ವಿಪಕ್ಷ ಮುಖಾಮುಖಿ
ಬೆಳಗಾವಿ (ಸುವರ್ಣಸೌಧ): ಬಿಜೆಪಿ ಸದಸ್ಯರ ತೀವ್ರ ವಿರೋಧ, ಗದ್ದಲ ಮತ್ತು ಪ್ರತಿಭಟನೆಗಳ ನಡುವೆಯೇ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕವನ್ನು ವಿಧಾನಸಭೆ ಇಂದು ಅಂಗೀಕರಿಸಿತು. ವಿಧೇಯಕ ಮಂಡನೆ ಹಾಗೂ ಚರ್ಚೆ ಸಂದರ್ಭದಲ್ಲಿ ಆಡಳಿತ ಪಕ್ಷ ಮತ್ತು ವಿಪಕ್ಷಗಳ ನಡುವೆ ತೀವ್ರ ಮಾತಿನ ಸಮರ ನಡೆಯಿತು.
ವಿಧಾನಸಭೆಯಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ವಿಧೇಯಕದ ಉದ್ದೇಶ ಮತ್ತು ಅಂಶಗಳನ್ನು ವಿವರಿಸಿದರು. ಸಮಾಜದಲ್ಲಿ ದ್ವೇಷ ಭಾಷಣಗಳು ಮತ್ತು ದ್ವೇಷ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆ ಈ ಕಾಯ್ದೆ ಅಗತ್ಯವಿದೆ ಎಂದು ಅವರು ಸಮರ್ಥಿಸಿದರು. ಆದರೆ ಇದಕ್ಕೆ ವಿಪಕ್ಷ ನಾಯಕ ಆರ್. ಅಶೋಕ್ ತೀವ್ರ ವಿರೋಧ ವ್ಯಕ್ತಪಡಿಸಿದರು. ಡಾ. ಹೆಚ್.ಸಿ. ಮಹಾದೇವಪ್ಪ ಮಂಡಿಸಿದ್ದ ವಿಧೇಯಕ ಜನಪರವಾಗಿತ್ತು. ಆದರೆ ಡಾ. ಪರಮೇಶ್ವರ್ ಮಂಡಿಸಿರುವುದು ದ್ವೇಷ ಹುಟ್ಟಿಸುವ ವಿಧೇಯಕ ಎಂದು ಅವರು ಆರೋಪಿಸಿದರು.
ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ ಹಣ ವಿಳಂಬ: ಸದನದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿಷಾದ
ಅಂಬೇಡ್ಕರ್ ವಿಚಾರದಲ್ಲಿ ತೀವ್ರ ವಾಗ್ವಾದ: ವಿಧೇಯಕ ಚರ್ಚೆ ವೇಳೆ ಸದನದಲ್ಲಿ ಅಂಬೇಡ್ಕರ್ ವಿಚಾರವೂ ಪ್ರಸ್ತಾಪಕ್ಕೆ ಬಂತು. ಬಿಜೆಪಿ ಶಾಸಕ ಸುರೇಶ್ ಕುಮಾರ್, ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಕಾಂಗ್ರೆಸ್ ಪಕ್ಷವೇ ಎಂದು ಆರೋಪಿಸಿದರು. ಇದಕ್ಕೆ ತಕ್ಷಣ ತಿರುಗೇಟು ನೀಡಿದ ಸಚಿವ ಸಂತೋಷ ಲಾಡ್, ಅಂಬೇಡ್ಕರ್ ಅವರನ್ನು ದೇಶದ ಮೊದಲ ಕಾನೂನು ಸಚಿವರನ್ನಾಗಿ ಮಾಡಿದ್ದು ಕಾಂಗ್ರೆಸ್ ಎಂದು ಪ್ರತಿಕ್ರಿಯಿಸಿದರು. ಈ ಮಾತಿನ ಬಳಿಕ ಸದನದಲ್ಲಿ ಗದ್ದಲ ತೀವ್ರಗೊಂಡಿತು.
ಕರಾವಳಿ ಹೇಳಿಕೆಗೂ ಭಾರಿ ಆಕ್ರೋಶ: ಇದೇ ವೇಳೆ ವಿಪಕ್ಷ ನಾಯಕ ಆರ್. ಅಶೋಕ್ ತಮ್ಮ ಭಾಷಣ ಮುಂದುವರಿಸುತ್ತಿದ್ದಾಗ ಸಚಿವ ಬೈರತಿ ಸುರೇಶ್ ಕರಾವಳಿಯಲ್ಲಿ ಬೆಂಕಿ ಹಾಕಿದವರು ಇಲ್ಲಿಯೂ ಬಂದು ಬೆಂಕಿ ಹಾಕಬೇಡಿ ಎಂದು ಹೇಳಿದ ಮಾತು ಬಿಜೆಪಿ ಶಾಸಕರನ್ನು ಮತ್ತಷ್ಟು ಕೆರಳಿಸಿತು. ವಿಶೇಷವಾಗಿ ಕರಾವಳಿ ಭಾಗದ ಬಿಜೆಪಿ ಶಾಸಕರು ಅಕ್ಷರಶಃ ಸಿಡಿದೆದ್ದರು. ಯಾರು ಬೆಂಕಿ ಹಚ್ಚಿದ್ದು? ಇಡೀ ಕರಾವಳಿಯನ್ನು ಅವಮಾನ ಮಾಡಿದ್ದಾರೆ. ಮೊದಲ ದ್ವೇಷ ಭಾಷಣದ ಕೇಸ್ ಬೈರತಿ ಸುರೇಶ್ ಮೇಲೆಯೇ ಹಾಕಬೇಕು ಎಂದು ಬಿಜೆಪಿ ಸದಸ್ಯರು ಒಟ್ಟಾಗಿ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಸಿದ್ದರಾಮಯ್ಯ ಔಟ್‌ಗೋಯಿಂಗ್ ಚೀಫ್ ಮಿನಿಸ್ಟರ್
ಈ ಸಂದರ್ಭದಲ್ಲಿ ಕೆಲವು ಬಿಜೆಪಿ ಸದಸ್ಯರು ಸ್ಪೀಕರ್‌ರ ಮೇಲೆಯೂ ಅಸಮಾಧಾನ ವ್ಯಕ್ತಪಡಿಸಿದರು. ನೀವು ಕರಾವಳಿ ಭಾಗದವರಾಗಿದ್ದರೂ ಸುಮ್ಮನೆ ಕುಳಿತಿದ್ದೀರಿ. ನಮ್ಮ ಕರಾವಳಿಗೆ ಕೆಟ್ಟ ಹೆಸರು ತರುವ ರೀತಿಯಲ್ಲಿ ಮಾತನಾಡಲಾಗಿದೆ ಎಂದು ಆಕ್ಷೇಪಿಸಿದರು.
ಧರಣಿ–ಪ್ರತಿಭಟನೆಯ ನಡುವೆಯೂ ವಿಧೇಯಕ ಅಂಗೀಕಾರ: ಸ್ಪೀಕರ್ ಅವರು ಬೈರತಿ ಸುರೇಶ್ ಹೇಳಿಕೆಯನ್ನು ಕಡತದಿಂದ ತೆಗೆದುಹಾಕುವುದಾಗಿ ಭರವಸೆ ನೀಡಿದರೂ ಬಿಜೆಪಿ ಸದಸ್ಯರು ಸಮಾಧಾನಗೊಂಡಿಲ್ಲ. ವಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ಬಿಜೆಪಿ ಶಾಸಕರು ಸದನದ ಭಾವಿಗಿಳಿದು ಧರಣಿ ನಡೆಸಿದರು. ಈ ವೇಳೆ ಅವರು ವಿಧೇಯಕದ ಪ್ರತಿಯನ್ನು ಹರಿದು ಹಾಕಿ ತೀವ್ರ ವಿರೋಧ ವ್ಯಕ್ತಪಡಿಸಿದರು.
ಆದರೆ ಇಂತಹ ಗದ್ದಲ ಮತ್ತು ಪ್ರತಿಭಟನೆಯ ನಡುವೆಯೂ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕವನ್ನು ವಿಧಾನಸಭೆ ಅಂಗೀಕರಿಸಿತು. ಈ ವಿಧೇಯಕ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ದೊಡ್ಡ ರಾಜಕೀಯ ಚರ್ಚೆಗೆ ಕಾರಣವಾಗುವ ಸಾಧ್ಯತೆ ಇದೆ.





















