Home ನಮ್ಮ ಜಿಲ್ಲೆ ಬೆಳಗಾವಿ ICSI, CBSE ಸೇರಿದಂತೆ ಎಲ್ಲ ಪಠ್ಯಕ್ರಮ ಶಾಲೆಗಳಲ್ಲಿ ಕನ್ನಡ ಕಡ್ಡಾಯ

ICSI, CBSE ಸೇರಿದಂತೆ ಎಲ್ಲ ಪಠ್ಯಕ್ರಮ ಶಾಲೆಗಳಲ್ಲಿ ಕನ್ನಡ ಕಡ್ಡಾಯ

0
12

ಬೆಳಗಾವಿ (ಸುವರ್ಣಸೌಧ): ಐಸಿಎಸ್‌ಇ, ಸಿಬಿಎಸ್‌ಇ, ಐಬಿಐಜಿಸಿಎಸ್‌ ಸೇರಿದಂತೆ ವಿವಿಧ ಪಠ್ಯಕ್ರಮಗಳನ್ನು ಬೋಧಿಸುವ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡ ಭಾಷಾ ಕಲಿಕೆಗೆ ಕಡ್ಡಾಯವಾಗಿ ಒತ್ತು ನೀಡಬೇಕು ಎಂದು ರಾಜ್ಯ ಸರ್ಕಾರ ಸ್ಪಷ್ಟ ನಿರ್ದೇಶನ ನೀಡಿದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕನ್ನಡ ಭಾಷಾ ಕಲಿಕಾ ಅಧಿನಿಯಮ–2015ನ್ನು ರಾಜ್ಯದಲ್ಲಿ ಕಡ್ಡಾಯವಾಗಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದರು. ಈ ಅಧಿನಿಯಮದ ಅನುಷ್ಠಾನಕ್ಕೆ ಸಂಬಂಧಿಸಿದ ನಿಯಮಗಳನ್ನು ಶಿಕ್ಷಣ ಇಲಾಖೆ 2017ನೇ ಸಾಲಿನಲ್ಲಿ ರೂಪಿಸಿ ಜಾರಿಗೊಳಿಸಿದೆ ಎಂದರು.

ಇದನ್ನೂ ಓದಿ: ಹೈಕಮಾಂಡ್ ಸೂಚಿಸುವವರೆಗೂ ನಾನೇ ಮುಖ್ಯಮಂತ್ರಿ

ಕನ್ನಡ ಭಾಷಾ ಕಲಿಕಾ ಅಧಿನಿಯಮವನ್ನು ಪಾಲಿಸದ ಶಾಲೆಗಳ ವಿರುದ್ಧ ಸಂಬಂಧಪಟ್ಟ ಉಪ ನಿರ್ದೇಶಕರು (ಆಡಳಿತ) ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ನೋಟಿಸ್ ಜಾರಿ ಮಾಡಲಾಗಿದೆ. ಅಧಿನಿಯಮ ಉಲ್ಲಂಘಿಸಿದ ಬೆಂಗಳೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯ ಆನೇಕಲ್ ತಾಲೂಕಿನ ದೊಮ್ಮಸಂದ್ರದಲ್ಲಿರುವ ‘ದಿ ಬೆಂಗಳೂರು ಇಂಟರ್‌ನ್ಯಾಷನಲ್ ಶಾಲೆ’ ಹಾಗೂ ದೊಡ್ಡಕಣ್ಣಹಳ್ಳಿಯ ‘ಇನೋವೇಟಿವ್ ಶಾಲೆ’ಗಳ ಮೇಲೆ ನಿಯಮಾನುಸಾರ ದಂಡ ವಿಧಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ರಾಜ್ಯದಲ್ಲಿ ಖಾಸಗಿ ಶಾಲೆಗಳ ನೊಂದಣಿಯ ಸಂದರ್ಭದಲ್ಲಿ, ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಬೋಧಿಸುವುದು ಕಡ್ಡಾಯವಾಗಿದ್ದು, ಈ ಷರತ್ತಿನ ಮೇರೆಗೆ ಶಾಲೆಗಳಿಗೆ ನೊಂದಣಿ ನೀಡಲಾಗುತ್ತಿದೆ. ಖಾಸಗಿ ಶಾಲೆಗಳ ಮಾನ್ಯತೆ ನವೀಕರಣ ಪ್ರಕ್ರಿಯೆಯಲ್ಲಿಯೂ ಸಹ ಕನ್ನಡ ಭಾಷಾ ಕಲಿಕಾ ಅಧಿನಿಯಮದ ಷರತ್ತುಗಳನ್ನು ಕಟ್ಟುನಿಟ್ಟಾಗಿ ಅನ್ವಯಿಸಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.

ಇನ್ನು ರಾಜ್ಯ ಪಠ್ಯಕ್ರಮವನ್ನು ಅನುಸರಿಸುತ್ತಿರುವ ಶಾಲೆಗಳು ಇತರೆ ಪಠ್ಯಕ್ರಮಗಳಿಗೆ ಸಂಯೋಜನೆ ಪಡೆಯಲು ನಿರಾಕ್ಷೇಪಣ ಪತ್ರ (NOC) ಕೋರಿ ಅರ್ಜಿ ಸಲ್ಲಿಸುವಾಗ, ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಬೋಧಿಸುವುದಾಗಿ ಮುಚ್ಚಳಿಕೆ ಪತ್ರ ಸಲ್ಲಿಸಿ, ಅಧಿನಿಯಮವನ್ನು ಪಾಲಿಸುವುದಾಗಿ ಪ್ರಮಾಣಿಕರಿಸಬೇಕು. ಈ ಷರತ್ತುಗಳನ್ನು ಪೂರೈಸಿದ ಶಾಲೆಗಳಿಗೆ ಮಾತ್ರ ನಿರಾಕ್ಷೇಪಣ ಪತ್ರ ನೀಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ರಾಜ್ಯದ ಭಾಷಾ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವ ಉದ್ದೇಶದಿಂದ ಸರ್ಕಾರ ಕನ್ನಡ ಭಾಷಾ ಕಲಿಕೆಯನ್ನು ಎಲ್ಲ ಶಾಲೆಗಳಲ್ಲಿ ಕಡ್ಡಾಯಗೊಳಿಸಿದ್ದು, ಅಧಿನಿಯಮ ಉಲ್ಲಂಘನೆಗೆ ಯಾವುದೇ ರೀತಿಯ ಸಡಿಲಿಕೆ ನೀಡುವುದಿಲ್ಲ ಎಂದು ಸಚಿವ ಮಧು ಬಂಗಾರಪ್ಪ ಎಚ್ಚರಿಕೆ ನೀಡಿದ್ದಾರೆ.