Home ನಮ್ಮ ಜಿಲ್ಲೆ ಬೆಳಗಾವಿ ಗೃಹಲಕ್ಷ್ಮಿ ಯೋಜನೆ ಹಣ ವಿಳಂಬ: ಸದನದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿಷಾದ

ಗೃಹಲಕ್ಷ್ಮಿ ಯೋಜನೆ ಹಣ ವಿಳಂಬ: ಸದನದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿಷಾದ

0
42

ಎರಡು ತಿಂಗಳ ಹಣ ಪಾವತಿಯಲ್ಲಿ ವ್ಯತ್ಯಯ – ತಪ್ಪು ಒಪ್ಪಿಕೊಂಡ ಸಚಿವೆ, ಶೀಘ್ರ ಪರಿಹಾರ ಭರವಸೆ

ಬೆಳಗಾವಿ (ಸುವರ್ಣಸೌಧ): ಗೃಹಲಕ್ಷ್ಮಿ ಯೋಜನೆಯ ಹಣ ಪಾವತಿಗೆ ಸಂಬಂಧಿಸಿದಂತೆ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ತಪ್ಪು ಮಾಹಿತಿ ನೀಡಿದ ಆರೋಪದ ಹಿನ್ನೆಲೆಯಲ್ಲಿ ತೀವ್ರ ವಿರೋಧಕ್ಕೆ ಗುರಿಯಾಗಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬುಧವಾರ ಸದನದಲ್ಲಿ ಸ್ಪಷ್ಟನೆ ನೀಡಿದರು.

ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳಿಗೆ ನೀಡಬೇಕಾದ ಎರಡು ತಿಂಗಳ ಹಣ ಪಾವತಿಯಲ್ಲಿ ವಿಳಂಬವಾಗಿರುವುದು ಸತ್ಯ ಎಂದು ಸಚಿವೆ ಒಪ್ಪಿಕೊಂಡರು. ಈ ವಿಚಾರವನ್ನು ಪರಿಶೀಲನೆ ನಡೆಸಿದಾಗ ಕೆಲವು ಫಲಾನುಭವಿಗಳಿಗೆ ಇನ್ನೂ ಎರಡು ತಿಂಗಳ ಹಣ ಜಮೆಯಾಗಿಲ್ಲ ಎಂಬುದು ಬೆಳಕಿಗೆ ಬಂದಿದೆ ಎಂದು ಹೇಳಿದರು.

ಇದನ್ನೂ ಓದಿ: ಸ್ಪರ್ಧಾತ್ಮಕ ಪರೀಕ್ಷೆಗಳ ಒತ್ತಡಕ್ಕೆ ನಲುಗಿ ಯುವತಿ ಆತ್ಮಹತ್ಯೆ

ಹಣ ದುರುಪಯೋಗವಾಗಿಲ್ಲ – ಸಚಿವೆ ಸ್ಪಷ್ಟನೆ: ಈ ವೇಳೆ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಬೇರೆ ಯಾವುದೇ ಉದ್ದೇಶಕ್ಕೆ ವರ್ಗಾಯಿಸಲಾಗಿಲ್ಲ. ಯಾವುದೇ ದುರುಪಯೋಗವೂ ಆಗಿಲ್ಲ” ಎಂದು ಸ್ಪಷ್ಟಪಡಿಸಿದರು. ಈ ವಿಷಯದಲ್ಲಿ ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರೂ ಆಗಿರುವ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಸಮಸ್ಯೆಯನ್ನು ಶೀಘ್ರ ಬಗೆಹರಿಸಲಾಗುವುದು ಎಂಬ ಭರವಸೆ ನೀಡಿದರು.

ಮುಖ್ಯಮಂತ್ರಿಗಳು ಈಗಾಗಲೇ ಸದನದಲ್ಲಿ ಈ ವಿಷಯವನ್ನು ಆದಷ್ಟು ಬೇಗ ಪರಿಹರಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಅವರು ನೆನಪಿಸಿದರು.

ತಪ್ಪಿದ್ದರೆ ವಿಷಾದ: ನಾನು ಜವಾಬ್ದಾರಿಯ ಸ್ಥಾನದಲ್ಲಿದ್ದೇನೆ. ಸದನವನ್ನು ದಾರಿ ತಪ್ಪಿಸುವ ಉದ್ದೇಶ ನನಗಿಲ್ಲ. ನನ್ನ ಬಳಿ ಇದ್ದ ಮಾಹಿತಿಯ ಆಧಾರದಲ್ಲೇ ಉತ್ತರ ನೀಡಿದ್ದೇನೆ. ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.

ಇದನ್ನೂ ಓದಿ: ಹೈಕಮಾಂಡ್ ಸೂಚಿಸುವವರೆಗೂ ನಾನೇ ಮುಖ್ಯಮಂತ್ರಿ

ವಿರೋಧ ಪಕ್ಷಗಳಿಂದ ಕ್ಷಮೆ ಆಗ್ರಹ: ಸಚಿವರ ಈ ಉತ್ತರದ ವೇಳೆ ಅರವಿಂದ ಬೆಲ್ಲದ್ ಸೇರಿದಂತೆ ವಿರೋಧ ಪಕ್ಷದ ಸದಸ್ಯರು ಕ್ಷಮೆ ಕೇಳುವಂತೆ ಆಗ್ರಹಿಸಿದರು, ಇದರಿಂದ ಸದನದಲ್ಲಿ ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಯಿತು. ಸಚಿವೆ ತಮ್ಮ ಹೇಳಿಕೆಯನ್ನು ಮುಂದುವರೆಸುತ್ತಾ, ಆರ್ಥಿಕ ಇಲಾಖೆಯೊಂದಿಗೆ ಮಾತನಾಡಿ ಹಣ ಇನ್ನೂ ಜಮೆಯಾಗದೇ ಇದ್ದರೆ ತಕ್ಷಣ ಬಿಡುಗಡೆ ಮಾಡಲು ಸೂಚಿಸಲಾಗುವುದು ಎಂದರು.

ಮುಂದಿನ ದಿನಗಳಲ್ಲಿ ತಿದ್ದುಪಡಿ ಭರವಸೆ: ಎರಡು ತಿಂಗಳ ಹಣ ಪಾವತಿಯಲ್ಲಿ ಉಂಟಾಗಿರುವ ವ್ಯತ್ಯಯವನ್ನು ಶೀಘ್ರ ಸರಿಪಡಿಸಲಾಗುವುದು ಎಂದು ಭರವಸೆ ನೀಡಿದ ಸಚಿವೆ, ಗೃಹಲಕ್ಷ್ಮಿ ಯೋಜನೆಯ ಹಣ ಫಲಾನುಭವಿಗಳಿಗೆ ತಲುಪಿಸುವುದೇ ಸರ್ಕಾರದ ಉದ್ದೇಶ ಎಂದು ಪುನರುಚ್ಚರಿಸಿದರು.