ಬೆಳಗಾವಿ: ಗೃಹಲಕ್ಷ್ಮಿ ಬಾಕಿ ಕಂತುಗಳ ವಿಷಯವಾಗಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಬುಧವಾರ ವಿಧಾನಸಭೆಯಲ್ಲಿ ಭಾರೀ ಚಕಮಕಿ ನಡೆಯಿತು. ಕಲಾಪ ಶುರುವಾಗುತ್ತಿದ್ದಂತೇ ನಡೆದ ಈ ಘಟನೆಯಿಂದಾಗಿ ಸುಸೂತ್ರ ಕಲಾಪಕ್ಕೆ ನಾಲ್ಕು ತಾಸುಗಳಷ್ಟು ವ್ಯತ್ಯಯ ಉಂಟಾಯಿತು.
ಸದನಕ್ಕೆ ಸರ್ಕಾರ ದಾರಿ ತಪ್ಪಿಸಿದೆ. ಫೆಬ್ರುವರಿ ಮತ್ತು ಮಾರ್ಚ್ ತಿಂಗಳ ಕಂತುಗಳನ್ನು ಹಾಕದೇ 1.26 ಕೋಟಿ ಫಲಾನುಭವಿಗಳಿಗೆ ಅನ್ಯಾಯ ಮಾಡಿದೆ. ಒಟ್ಟು ಐದು ಸಾವಿರ ಕೋಟಿ ರೂಪಾಯಿಗಳ ಲೆಕ್ಕ ಎಲ್ಲಿ ಹೋಯಿತು ಎಂಬ ಪ್ರಶ್ನೆ ಮೂಡಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕ್ಷಮೆ ಕೋರಬೇಕು ಎಂಬುದು ಪ್ರತಿಪಕ್ಷದ ಬೇಡಿಕೆಯಾಗಿತ್ತು.
ಗದ್ದಲಕ್ಕೆ ಕಾರಣ: ಗೃಹಲಕ್ಷ್ಮೀ ಕಂತುಗಳನ್ನು ಹಾಕುವಾಗ, ಮಧ್ಯದಲ್ಲಿ ಫೆಬ್ರುವರಿ ಹಾಗೂ ಮಾರ್ಚ್ ಎರಡು ತಿಂಗಳ ಕಂತುಗಳನ್ನು ಏಕೆ ಹಾಕಿಲ್ಲ ಎಂದು ಹುಬ್ಬಳ್ಳಿ ಸೆಂಟ್ರಲ್‌ನ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಪ್ರಶ್ನಿಸಿದ್ದರು. ಆಗಸ್ಟ್‌ವರೆಗಿನ ಎಲ್ಲ ಕಂತುಗಳನ್ನೂ ಹಾಕಲಾಗಿದೆ ಎಂಬ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಾತನ್ನು ವಿರೋಧಿಸಿ, ಕಂತುಗಳು ಬಾರದಿರುವ ಬಗ್ಗೆ ವಿಪಕ್ಷ ನಾಯಕ ಆರ್. ಅಶೋಕ ಅವರಿಗೆ ದಾಖಲೆಗಳನ್ನು ಸಲ್ಲಿಸಿದ್ದರು.
ಅಶೋಕ್ ಸರ್ಕಾರಕ್ಕೆ ಬಿಸಿ ಮುಟ್ಟಿಸಿ ಸದನಕ್ಕೆ ತಪ್ಪು ಮಾಹಿತಿ ಕೊಟ್ಟಿರುವುದಕ್ಕೆ ಸಚಿವರು ಕ್ಷಮೆ ಕೇಳಬೇಕು ಹಾಗೂ ಲೋಪವನ್ನು ಒಪ್ಪಿಕೊಳ್ಳಬೇಕು ಎಂದು ಆಗ್ರಹಿಸಿದ್ದರು. ಇದಕ್ಕೆ ಸ್ಪೀಕರ್ ಯು.ಟಿ. ಖಾದರ್ ಸಚಿವರಿಂದ ಸ್ಪಷ್ಟನೆ ಕೊಡಿಸುವುದಾಗಿ ಹೇಳಿದ್ದರು. ಕಳೆದ ವಾರದ ಕೊನೆಯಲ್ಲಿ ಹೇಳಿದ್ದರು.
ಬುಧವಾರ ಕಲಾಪ ಆರಂಭವಾಗುತ್ತಿದ್ದಂತೇ ಅಶೋಕ್ ವಿಷಯವನ್ನು ಕೈಗೆತ್ತಿಕೊಂಡು `ಸಚಿವರಿಂದ ಸ್ಪಷ್ಟನೆ ದೊರೆಯದೇ ಕಲಾಪಗಳನ್ನು ಕೈಗೆತ್ತಿಕೊಳ್ಳಲು ಸಮ್ಮತಿ ಇಲ್ಲ’ ಎಂದು ಹೇಳಿದರು.
ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಗ ಸದನದಲ್ಲಿ ಇರಲಿಲ್ಲ. ಹೀಗಾಗಿ ಕಲಾಪದ ಉಳಿದ ವಿಷಯಗಳತ್ತ ಸದನ ಹೊರಳಿದ್ದನ್ನು ಒಪ್ಪದ ವಿಪಕ್ಷ ಬಾವಿಗೆ ಇಳಿದು ಧರಣಿ ಆರಂಭಿಸಿತು. ಇದರಿಂದ ಕಲಾಪವನ್ನು ಮುಂದೂಡಬೇಕಾಯಿತು.
ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬಂದು ಕಲಾಪ ಶುರುವಾಗುತ್ತಿದ್ದಂತೇ ಅಶೋಕ್ ವಿಪಕ್ಷದ ನಿಲುವು ಪುನರುಚ್ಚರಿಸಿದರು. ತಪ್ಪಾಗಿರುವುದನ್ನು ಒಪ್ಪಿಕೊಂಡು ಸದನದ ಕ್ಷಮೆ ಕೋರಬೇಕು ಎಂದು ಪಟ್ಟು ಹಿಡಿದರು.
`ಎರಡು ತಿಂಗಳ ಕಂತುಗಳು ಉಳಿದಿರುವುದು ನಿಜ. ಆದಷ್ಟು ಬೇಗ ಈ ಕಂತುಗಳನ್ನು ಫಲಾನುಭವಿಗಳಿಗೆ ನೀಡಲಾಗುವುದು. ಯಾರಿಗಾದರೂ ನೋವಾಗಿದ್ದರೆ ವಿಷಾದಿಸುವೆ’ ಎಂದು ಸಚಿವೆ ಹೆಬ್ಬಾಳಕರ್ ಹೇಳಿದ್ದು ವಿಪಕ್ಷಕ್ಕೆ ತೃಪ್ತಿ ತರಲಿಲ್ಲ. ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷದ ನಡುವೆ ವಾಗ್ವಾದ ನಡೆಯಿತು. ವಿಷಾದ- ಕ್ಷಮೆ ಪದಗಳ ಜಿಜ್ಞಾಸೆಯಲ್ಲಿ ಒಂದು ತಾಸಿಗೂ ಮೀರಿ ಟೀಕೆ ಪ್ರತಿಟೀಕೆಗಳು ನಡೆದವು.






















