Home ನಮ್ಮ ಜಿಲ್ಲೆ ಬೆಳಗಾವಿ ಸರಕಾರದಿಂದ 23 ಕಂಬಳೋತ್ಸವಕ್ಕೆ ತಲಾ 5 ಲಕ್ಷ ರೂ. ನೆರವು

ಸರಕಾರದಿಂದ 23 ಕಂಬಳೋತ್ಸವಕ್ಕೆ ತಲಾ 5 ಲಕ್ಷ ರೂ. ನೆರವು

0
90

ಬೆಳಗಾವಿ (ಸುವರ್ಣಸೌಧ): ಕರಾವಳಿ ಸಂಸ್ಕೃತಿಯ ಹೆಮ್ಮೆ, ಪರಂಪರಾತ್ಮಕ ಕ್ರೀಡೆ ಕಂಬಳನ್ನು ಉತ್ತೇಜಿಸಲು ಸರ್ಕಾರ ದೊಡ್ಡ ಮಟ್ಟದ ಸಹಾಯವನ್ನು ಮುಂದುವರಿಸಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ 23 ಕಂಬಳೋತ್ಸವಗಳಿಗೆ ತಲಾ ₹5 ಲಕ್ಷ ಅನುದಾನ ಬಿಡುಗಡೆ ಮಾಡಲು ಸರ್ಕಾರ ಅಧಿಕೃತ ಅನುಮೋದನೆ ನೀಡಿದೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಚಳಿಗಾಲದ ಅಧಿವೇಶನದಲ್ಲಿ ಮಾಹಿತಿ ನೀಡಿದರು.

ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕ ಅಶೋಕ್ ರೈ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು, 2025–26ನೇ ಸಾಲಿನಲ್ಲಿ ಆಯೋಜಿಸಲಿರುವ ಕಂಬಳಗಳಿಗೆ ಜಿಲ್ಲೆಯ ಕಂಬಳ ಸಮಿತಿ ಶಿಫಾರಸು ಮಾಡಿದ 23 ಕಾರ್ಯಕ್ರಮಗಳಿಗೆ ಅನುದಾನ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು. ಅನುದಾನ ಬಿಡುಗಡೆಗೆ ಸಂಬಂಧಿಸಿದ ಕಡತವನ್ನು ಈಗಾಗಲೇ ಹಣಕಾಸು ಇಲಾಖೆಗೆ ರವಾನಿಸಲಾಗಿದೆ ಎಂದು ತಿಳಿಸಿದರು.

2024–25ರಲ್ಲಿ 10 ಕಂಬಳಗಳಿಗೆ ಈಗಾಗಲೇ ಅನುದಾನ: ಹಿಂದಿನ ವರ್ಷ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ, ಮಂಗಳೂರು, ನರಿಂಗಾಣ, ಮೂಡಬಿದ್ರೆ, ಐಕಳ, ಜಪ್ಪು, ಪುತ್ತೂರು, ಬಂಟ್ವಾಳ, ಉಪ್ಪಿನಂಗಡಿ ಹಾಗೂ ವೇಣೂರಿನಲ್ಲಿ ಆಯೋಜಿಸಿದ್ದ 10 ಕಂಬಳೋತ್ಸವಗಳಿಗೆ ತಲಾ ₹5 ಲಕ್ಷದಂತೆ ರೂ.50 ಲಕ್ಷ ಬಿಡುಗಡೆ ಆಗಿದೆ.

ಕಂಬಳ ಪರಂಪರೆಯ ಸಂರಕ್ಷಣೆ: ಕರಾವಳಿ ಜನರ ಸಂಸ್ಕೃತಿ ಮತ್ತು ನಾಡಿನ ಗುರುತಾಗಿರುವ ಕಂಬಳ ಪರಂಪರೆಯನ್ನು ಉಳಿಸಿ, ಉತ್ತೇಜಿಸುವುದು ಸರ್ಕಾರದ ಕರ್ತವ್ಯ. ಸ್ಥಳೀಯ ಕ್ರೀಡಾ ಮತ್ತು ಗ್ರಾಮೀಣ ಸಂಸ್ಕೃತಿ ಸಂರಕ್ಷಣೆಗೆ ನಿಯಮಿತ ಅನುದಾನ ವ್ಯವಸ್ಥೆ ಮುಂದುವರಿಸಲಾಗುವುದು. ಕೃಷಿ ತಂತ್ರಜ್ಞಾನಕ್ಕೆ ಆಧಾರವಾಗಿರುವ ಕಂಬಳಕ್ಕೆ ಸ್ಥಿರ ಆರ್ಥಿಕ ಬೆಂಬಲ ನೀಡುವ ನಿಲುವನ್ನು ಸಚಿವರು ಪುನರುಚ್ಚರಿಸಿದರು.

ಕಂಬಳ — ಕ್ರೀಡೆಗಿಂತಲೂ ಜನಪರ ಪರಂಪರೆ: ಕಂಬಳ ಕೇವಲ ಓಟವಲ್ಲ ಕರಾವಳಿ ಪ್ರದೇಶದ ಬಳೆ, ಭೂಮಿ, ಜಲ ಮತ್ತು ನಾಡಿನ ಸಂಸ್ಕೃತಿ ಜೊತೆಗೂಡಿರುವ ಜಾನಪದ ಹಬ್ಬವನ್ನೇ ಪ್ರತಿಬಿಂಬಿಸುತ್ತದೆ.