ಅಥಣಿ: ಧಾರ್ಮಿಕ ಅಂಧ ನಂಬಿಕೆಯಿಂದಾಗಿ ಸೆಪ್ಟೆಂಬರ್ 8ರಂದು ದೇಹತ್ಯಾಗ ಮಾಡುವುದಾಗಿ ನಿರ್ಧರಿಸಿದ್ದ ಕುಟುಂಬದ ಐವರನ್ನು ತಾಲೂಕಾ ಆಡಳಿತ ಹಾಗೂ ಪೊಲೀಸ್ ಇಲಾಖೆಯ ಸಹಾಯದಿಂದ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಅಥಣಿ ತಾಲೂಕಿನ ಅನಂತಪುರ ಗ್ರಾಮದ ಹೊರವಲಯದಲ್ಲಿ ವಾಸವಾಗಿರುವ ಇರಕರ ಕುಟುಂಬದ ತುಕಾರಾಮ ಇರಕರ, ಪತ್ನಿ ಸಾವಿತ್ರಿ, ಮಗ ರಮೇಶ, ಸೊಸೆ ವೈಷ್ಣವಿ ಹಾಗೂ ಮಹಾರಾಷ್ಟ್ರದ ಕುಡನೂರ ಗ್ರಾಮದಲ್ಲಿದ್ದ ಮಗಳು ಮಾಯಾ ಶಿಂದೆ ಅವರು ರಾಮಪಾಲ್ ಮಹಾರಾಜರ ಶಿಷ್ಯರಾಗಿದ್ದು ಕಳೆದ 15 ದಿನಗಳಿಂದ ಧಾರ್ಮಿಕ ಭಕ್ತಿ-ಗಾನಗಳಲ್ಲಿ ತೊಡಗಿ ದೇಹತ್ಯಾಗಕ್ಕೆ ಸಜ್ಜಾಗಿದ್ದರು.
ಈ ಕುಟುಂಬಕ್ಕೆ ಜಿಲ್ಲಾಧಿಕಾರಿ ಮಹಮ್ಮದ್ ರೋಷನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಮತ್ತು ಹಲವಾರು ಮಠಾಧೀಶರು, ಜನಪ್ರತಿನಿಧಿಗಳು ಸೇರಿ ಮನವರಿಕೆ ಮಾಡಲು ಪ್ರಯತ್ನಿಸಿದ್ದರು. ಸ್ವಲ್ಪ ಮಟ್ಟಿಗೆ ನಿರ್ಧಾರ ಬದಲಾದರೂ ಮತ್ತೆ ಯಥಾಸ್ಥಿತಿಗೆ ಮರಳಿದ್ದರು.
ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ನಿಗಾ ವಹಿಸಿದ್ದ ಸ್ಥಳೀಯ ಅಧಿಕಾರಿ ಹಾಗೂ ಪೊಲೀಸರು ಕುಟುಂಬದವರನ್ನು ಭಾನುವಾರ ವಶಕ್ಕೆ ಪಡೆದು ಅನಂತಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದರು. ನಂತರ ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಅಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡದ ಡಿಮಾನ್ಸ್‌ಗೆ ಕಳುಹಿಸಲಾಗಿದೆ ಎಂದು ತಾಲೂಕು ವ್ಯದ್ಯಾಧಿಕಾರಿ ಡಾ. ಬಸಗೌಡ ಕಾಗೆ ತಿಳಿಸಿದರು.
ಸೆ. 8ರಂದು ಪ್ರಾಣತ್ಯಾಗದ ಹೇಳಿಕೆ ನೀಡಿದ್ದ ಇರಕರ್ ಕುಟುಂಬದ ಮನವೊಲಿಸಲು ತಾಲೂಕಾ ಆಡಳಿತಾಧಿಕಾರಿಗಳು ಹರಸಾಹಸ ಮಾಡಿದ್ದರು.
“ಇರಕರ ಕುಟುಂಬದವರು ಮನೋರೋಗಕ್ಕೆ ತುತ್ತಾಗಬಹುದು ಎಂದು ಧಾರವಾಡದ ಡಿಮಾನ್ಸ್‌ಗೆ ಐವರನ್ನು ಕಳುಹಿಸಿ ಕೊಟ್ಟಿದ್ದಾರೆ” ಎಂದು ಅಥಣಿ ತಾಲೂಕು ವೈದ್ಯಾಧಿಕಾರಿ ಡಾ. ಬಸಗೌಡ ಕಾಗೆ ಹೇಳಿದ್ದಾರೆ.
“ಅಥಣಿ ತಾಲೂಕಿನ ಅನಂತಪುರ ಗ್ರಾಮದ ಈರಕರ ಕುಟುಂಬಸ್ಥರಿಗೆ ಮನೋವೈದ್ಯಕೀಯ ಚಿಕಿತ್ಸೆ ಅವಶ್ಯಕತೆ ಕಂಡು ಬಂದಿರುವುದರಿಂದ ತಾಲೂಕಾ ವೈದ್ಯಾಧಿಕಾರಿ ಸಲಹೆ ಮೇರೆಗೆ ವೈದ್ಯಕೀಯ ಚಿಕಿತ್ಸೆಗೆ ಸೂಕ್ತ ಪೊಲೀಸ್ ಬೆಂಗಾವಲಿನಲ್ಲಿ ಕಳುಹಿಸಿ ಕೊಡಲಾಗಿದೆ” ಎಂದು ಡಿವೈಎಸ್‌ಪಿ ಪ್ರಶಾಂತ ಮುನ್ನೊಳ್ಳಿ ತಿಳಿಸಿದ್ದಾರೆ.