ಬೆಳಗಾವಿ: ರಾಜ್ಯದ ರೈತರ ಸಮಸ್ಯೆ, ಬೆಂಬಲ ಬೆಲೆ, ಸಕ್ಕರೆ ಬೆಲೆ ಮತ್ತು ಬಾಕಿ ಹಣ ಬಿಡುಗಡೆ ವಿಚಾರವಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲೇಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಮಂಗಳವಾರ ಬೆಳಗ್ಗೆ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಬಳಿಕ ಮಾಧ್ಯಮಗಳಿಗೆ ಮಾತನಾಡಿದ ಅವರು, ಚಳಿಗಾಲದ ಅಧಿವೇಶನದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳು ಒಂದಾಗಿ ರೈತರ ಜ್ವಲಂತ ಸಮಸ್ಯೆಗಳ ಕುರಿತಂತೆ ಚರ್ಚೆ ನಡೆಸಬೇಕು ಎಂದು ಹೇಳಿದರು.
“ರೈತರ ಸಮಸ್ಯೆ ವಿಚಾರದಲ್ಲಿ ಕೇಂದ್ರ ಸರ್ಕಾರ ಭಾಗವಹಿಸುವ ನಿಲುವು ತೋರುತ್ತಿಲ್ಲ. ಬೆಂಬಲ ಬೆಲೆ ಹಣ ಬಿಡುಗಡೆ ಯಾಕೆ ವಿಳಂಬ? ಸಕ್ಕರೆ ಕಾರ್ಖಾನೆಗಳಿಗೆ ಬಾಕಿ ಹಣ ಯಾಕೆ ಬಿಡುಗಡೆ ಆಗುತ್ತಿಲ್ಲ? ಉತ್ತರ ಕರ್ನಾಟಕಕ್ಕೆ ಬಾಕಿ ಇರುವ ಅನುದಾನ ಹಂಚಿಕೆ ಕುರಿತು ಕೇಂದ್ರದ ಮೇಲೆ ಒತ್ತಡ ತರಬೇಕು,” ಎಂದು ಅವರು ಬೇಡಿಕೆ ಇಟ್ಟರು.
ಕಬ್ಬು ಮತ್ತು ಮೆಕ್ಕೆಜೋಳ ಬೆಲೆಯಲ್ಲಿ ರಾಜ್ಯ ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡಿದೆ ಎಂದು ಅವರು ವಿವರಿಸಿದರು. “ನಾವು ರೈತರ ಪರವಾಗಿ ನಿಂತಿದ್ದೇವೆ. ಆದರೆ, ಬೆಲೆ ನಿಗದಿ ಅಧಿಕಾರ ಕೇಂದ್ರದಲ್ಲಿದೆ. ಕಳೆದ 10 ವರ್ಷಗಳಿಂದ ಸಕ್ಕರೆ ಬೆಲೆ ಹೆಚ್ಚಳವಾಗಿಲ್ಲ. ಇದರಿಂದ ಕಾರ್ಖಾನೆಗಳು ನಷ್ಟದ ಭೀತಿಯಲ್ಲಿವೆ. ಆದರೂ ರೈತರು ಬದುಕಬೇಕು ಎಂಬ ದೃಷ್ಟಿಯಿಂದ ಕ್ರಮ ಕೈಗೊಂಡಿದ್ದೇವೆ,” ಎಂದು ಹೇಳಿದರು.
ಬೆಳಗಾವಿ ಅಧಿವೇಶನಕ್ಕೆ ಆಗಮಿಸಿದ ವೇಳೆ ಅವರ ಬೆಂಬಲಿಗರು ‘ಮುಂದಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್’ ಘೋಷಣೆಗಳನ್ನು ಕೂಗಿದರು.
“ರೈತರ ಹಿತಾಭಿವೃದ್ಧಿ, ಸಕ್ಕರೆ ಬೆಲೆ ಸಮನ್ವಯ ಮತ್ತು ಬಾಕಿ ಹಣ ಬಿಡುಗಡೆ ವಿಚಾರವಾಗಿ ಚರ್ಚೆ ನಡೆಯಲಿದೆ. ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕಕ್ಕೆ ಬಾಕಿ ಹಣ ಬಿಡುಗಡೆ ವಿಚಾರವೂ ಗಂಭೀರವಾಗಿ ಮುಂದಿರಲಿದೆ,” ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.























