ವಿಧಾನಸಭೆಯಲ್ಲಿ ಸಂತಾಪ ಸೂಚನಾ ನಿರ್ಣಯಕ್ಕೆ ಬೆಂಬಲ – ಹಿರಿಯ ನಾಯಕನ ನಿಧನದಿಂದ ಜನಪರ ನಾಯಕನನ್ನು ಕಳೆದುಕೊಂಡಂತಾಗಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಳಗಾವಿ (ಸುವರ್ಣಸೌಧ): ದಾವಣಗೆರೆ ಜಿಲ್ಲೆ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿಯಾಗಲು ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಹಿರಿಯ ನಾಯಕನ ನಿಧನದ ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿ ಮಂಡಿಸಲಾದ ಸಂತಾಪ ಸೂಚನಾ ನಿರ್ಣಯವನ್ನು ಬೆಂಬಲಿಸಿ ಮಾತನಾಡಿದ ಅವರು, ಶಾಮನೂರು ಶಿವಶಂಕರಪ್ಪ ಅವರ ದೀರ್ಘಕಾಲದ ರಾಜಕೀಯ ಹಾಗೂ ಸಮಾಜಸೇವೆಯನ್ನು ಸ್ಮರಿಸಿದರು.
ಶಾಮನೂರು ಶಿವಶಂಕರಪ್ಪ ಅವರು 63ನೇ ವಯಸ್ಸಿನಲ್ಲಿ ವಿಧಾನಸಭೆ ಪ್ರವೇಶಿಸಿ ಆರು ಬಾರಿ ಶಾಸಕರಾಗಿ, ಒಮ್ಮೆ ಸಂಸತ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಅವರು ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. 1969ರಲ್ಲಿ ದಾವಣಗೆರೆ ಪುರಸಭೆ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿ, ನಂತರ ನಗರಸಭೆ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದು ಅವರ ಸಾರ್ವಜನಿಕ ಬದುಕಿನ ಆರಂಭಿಕ ಹಂತವಾಗಿತ್ತು.
ಇದನ್ನೂ ಓದಿ: ಶಾಮನೂರು ಶಿವಶಂಕರಪ್ಪ ಅಂತಿಮ ದರ್ಶನಕ್ಕೆ ಗಣ್ಯರು, ಅಭಿಮಾನಿಗಳ ಮಹಾಪೂರ
ಶಿಕ್ಷಣ ಕ್ಷೇತ್ರದಲ್ಲಿ ಅಮೂಲ್ಯ ಕೊಡುಗೆ: ದಾವಣಗೆರೆಯಲ್ಲಿ ಬಾಪೂಜಿ ವಿದ್ಯಾ ಕೇಂದ್ರ ಸ್ಥಾಪಿಸುವ ಮೂಲಕ ಇಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ಅನೇಕ ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸಿ ಜಿಲ್ಲೆಯನ್ನು ವಿದ್ಯಾಕಾಶಿಯಾಗಿ ರೂಪಿಸುವಲ್ಲಿ ಶಾಮನೂರು ಶಿವಶಂಕರಪ್ಪ ಪ್ರಮುಖ ಪಾತ್ರವಹಿಸಿದ್ದರು. ಉದ್ಯಮಿಯಾಗಿಯೂ ಅವರು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು.
ಜವಳಿ ಕ್ಷೇತ್ರ ಮತ್ತು ರಾಜಕೀಯ ಜೀವನ: ಜವಳಿ ಕ್ಷೇತ್ರ ಕುಸಿತದ ಹಂತದಲ್ಲಿದ್ದಾಗ ದಾವಣಗೆರೆಗೆ ಒಂದು ಬ್ರಾಂಡ್ ಹೆಸರು ತಂದುಕೊಟ್ಟವರು ಶಾಮನೂರು ಶಿವಶಂಕರಪ್ಪ. ಅವರು ದೀರ್ಘಕಾಲ ಎಐಸಿಸಿ ಖಜಾಂಚಿಯಾಗಿ ಕಾರ್ಯನಿರ್ವಹಿಸಿದ್ದು, ಎಲ್ಲರೊಂದಿಗೆ ಸ್ನೇಹಪೂರ್ಣ ಸಂಬಂಧ ಬೆಳೆಸಿಕೊಂಡು ಅಜಾತಶತ್ರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು ಎಂದು ಸಿದ್ದರಾಮಯ್ಯ ಹೇಳಿದರು.
ವೈಯಕ್ತಿಕ ಸ್ಮೃತಿಗಳು: ದಾವಣಗೆರೆಗೆ ಭೇಟಿ ನೀಡಿದಾಗಲೆಲ್ಲ ಶಾಮನೂರು ಅವರ ಗೆಸ್ಟ್‌ಹೌಸ್‌ನಲ್ಲಿ ತಂಗುತ್ತಿದ್ದೆ, ಅವರ ಒತ್ತಾಯದ ಮೇರೆಗೆ ಮನೆಯಲ್ಲಿಯೇ ಊಟ ಮಾಡುತ್ತಿದ್ದೆ. ನನ್ನ 75ನೇ ಜನ್ಮದಿನವನ್ನು ದಾವಣಗೆರೆಯಲ್ಲೇ ಆಚರಿಸಿಕೊಳ್ಳಲು ಅವರು ಅಪಾರ ಸಹಕಾರ ನೀಡಿದ್ದರು ಎಂದು ಮುಖ್ಯಮಂತ್ರಿ ತಮ್ಮ ವೈಯಕ್ತಿಕ ನೆನಪುಗಳನ್ನು ಹಂಚಿಕೊಂಡರು.
ಕಷ್ಟಕಾಲದಲ್ಲಿ ನೆರವಿನ ಹಸ್ತ: ಶಾಮನೂರು ಶಿವಶಂಕರಪ್ಪ ಅವರು ಕಷ್ಟದ ಸಂದರ್ಭಗಳಲ್ಲಿ ಜನರಿಗೆ ಸದಾ ನೆರವಾಗುತ್ತಿದ್ದರು. ಕೋವಿಡ್ ಸಂಕಷ್ಟದ ಸಮಯದಲ್ಲಿ ಆರು ಕೋಟಿ ರೂಪಾಯಿಗೂ ಹೆಚ್ಚು ವೆಚ್ಚ ಮಾಡಿ ಆಕ್ಸಿಜನ್ ಸರಬರಾಜು ವ್ಯವಸ್ಥೆ ಮಾಡಿದ್ದು ಅವರ ಮಾನವೀಯ ಗುಣಕ್ಕೆ ಸಾಕ್ಷಿಯಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಹಿಂದೆ ತಾವು ಮುಖ್ಯಮಂತ್ರಿ ಆಗಿದ್ದಾಗ ಶಾಮನೂರು ಶಿವಶಂಕರಪ್ಪ ಅವರು ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 2016ರ ಸಂಪುಟ ಪುನರ್ ರಚನೆಯ ವೇಳೆ ಅವರ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ್ ಅವರನ್ನು ಸಚಿವರನ್ನಾಗಿ ಮಾಡುವಂತೆ ಕೋರಿಕೊಂಡಿದ್ದರು. ಇಂದು ಮಲ್ಲಿಕಾರ್ಜುನ್ ಅವರು ಪ್ರಸ್ತುತ ಸಚಿವ ಸಂಪುಟದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಇದನ್ನೂ ಓದಿ: ಶಾಮನೂರಿನಿಂದ ದಾವಣಗೆರೆ ಧಣಿಯಾದ ಶಿವಶಂಕರಪ್ಪ
ಜನಪರ ನಾಯಕನ ಅಗಲಿಕೆ: ಸುಮಾರು 15 ದಿನಗಳ ಹಿಂದೆ ಆಸ್ಪತ್ರೆಗೆ ಭೇಟಿ ನೀಡಿದಾಗ ಅವರು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಅವರ ನಿಧನದಿಂದ ರಾಜ್ಯವು ಒಬ್ಬ ಜನಪರ ನಾಯಕನನ್ನು ಕಳೆದುಕೊಂಡಂತಾಗಿದೆ. ಅವರು ದೊಡ್ಡ ಕುಟುಂಬ ಮತ್ತು ಲಕ್ಷಾಂತರ ಅಭಿಮಾನಿಗಳನ್ನು ಅಗಲಿದ್ದು, ದೇವರು ಎಲ್ಲರಿಗೂ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಹಾಗೂ ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಾರ್ಥಿಸಿದರು.









