ಬೆಳಗಾವಿ: ನಾಳೆಯ ಭವಿಷ್ಯ ರೂಪಿಸುವ ಟಿಳಕವಾಡಿ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ನಂ. 5 ಮುಂದೆ ದಿನವೂ ಕಸದ ರಾಶಿ ದುರ್ವಾಸನೆ. ಹೀಗಾಗಿ ಮಕ್ಕಳಿಗೆ ಶಾಲೆಗೆ ಹೋಗುವುದೇ ಸಂಕಟವಾಗಿದ್ದ ಈ ದುಸ್ಥಿತಿಗೆ ಇಂದು ಉಪಮೇಯರ್ ವಾಣಿ ವಿಲಾಸ್ ಜೋಶಿ ಸ್ವತಃ ಭೆಟ್ಟಿ ನೀಡಿ ಬ್ರೇಕ್ ಹಾಕುವ ಕೆಲಸ ಮಾಡಿದರು.
ಸ್ಥಳೀಯರ ಮನವಿಗೆ ಸ್ಪಂದಿಸಿದ ಉಪಮೇಯರ್ ಅವರು, ಮಂಗಳವಾರ ಬೆಳಿಗ್ಗೆ ಶಾಲೆ ಗೇಟ್ ಮುಂದೆ ಬಿದ್ದಿದ್ದ ಕಸದ ರಾಶಿಯನ್ನು ಸಂಪೂರ್ಣ ತೆರವುಗೊಳಿಸಿ, ಅಲ್ಲೇ ತುಳಸಿ ಗಿಡ ನೆಡುವ ಮೂಲಕ ಸ್ವಚ್ಛತೆ ಮತ್ತು ಸಂಸ್ಕಾರದ ಸಂದೇಶ ನೀಡಿದರು.
ಮಕ್ಕಳು ಓದುವ ಸ್ಥಳ ಕಸದ ಕೊಠಡಿ ಆಗಬಾರದು. ಇದು ಅವರ ಭವಿಷ್ಯ ರೂಪಿಸುವ ಪವಿತ್ರ ಸ್ಥಳ ಎಂದು ವಾಣಿ ಜೋಶಿ ಹೇಳಿದರು. ಕಸದಿಂದ ಮುಚ್ಚಿಹೋಗಿದ್ದ ಶಾಲೆಯ ಪ್ರವೇಶ ದ್ವಾರ, ಇಂದು ಹಸಿರು ತುಳಸಿಯೊಂದಿಗೆ ಹೊಸ ಕಿರಣ ಪಡೆದಿದೆ. ಸ್ಥಳೀಯರು, ಶಿಕ್ಷಕರು ಮತ್ತು ಪಾಲಕರು ಈ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇದು ಕೇವಲ ಸ್ವಚ್ಛತೆ ಅಲ್ಲ ಮಕ್ಕಳ ಬದುಕಿನ ಗೌರವ ಎಂದು ಅಭಿಪ್ರಾಯಪಟ್ಟರು.
ಟಿಳಕವಾಡಿಯ ಈ ಒಂದು ಸಣ್ಣ ಹೆಜ್ಜೆ, ಇಡೀ ಬೆಳಗಾವಿಗೆ ಸ್ವಚ್ಛ ನಗರ ಸುರಕ್ಷಿತ ಮಕ್ಕಳ ಎಂಬ ದೊಡ್ಡ ಸಂದೇಶ ನೀಡಿದೆ.









