ಬೆಳಗಾವಿ (ಸುವರ್ಣಸೌಧ): ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಗ್ರಾಹಕರಿಗೆ ಮೋಸ ಮಾಡಿ ಗೃಹೋಪಯೋಗಿ ವಸ್ತುಗಳು ಹಾಗೂ ವಿವಿಧ ಸೇವೆಗಳನ್ನು ಮಾರಾಟ ಮಾಡುತ್ತಿದ್ದ ಕಂಪನಿಗಳ ವಿರುದ್ಧ ಕರ್ನಾಟಕ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಹಾಗೂ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಗಳಲ್ಲಿ ಒಟ್ಟು 2,334 ಪ್ರಕರಣಗಳು ದಾಖಲಾಗಿವೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳು ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ ಅವರು ತಿಳಿಸಿದ್ದಾರೆ.
ಈ ಪೈಕಿ 2,250 ಪ್ರಕರಣಗಳನ್ನು ಈಗಾಗಲೇ ಇತ್ಯರ್ಥಪಡಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು ಅವರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿ ಸಚಿವರು ಈ ಮಾಹಿತಿ ನೀಡಿದರು.
ಇದನ್ನೂ ಓದಿ: National Herald Case: ಸೋನಿಯಾಗಾಂಧಿ, ರಾಹುಲ್ಗೆ ತಾತ್ಕಾಲಿಕ ರಿಲೀಫ್
ಗ್ರಾಹಕರು ಯಾವುದೇ ವಸ್ತುವನ್ನು ಖರೀದಿಸುವಾಗ ಅಥವಾ ಸೇವೆಗಳನ್ನು ಪಡೆಯುವ ಸಂದರ್ಭದಲ್ಲಿ ವಂಚನೆಗೆ ಒಳಗಾದಲ್ಲಿ, ಗ್ರಾಹಕ ಸಂರಕ್ಷಣಾ ಕಾಯ್ದೆ–2019ರ ಅಡಿ ದೂರು ದಾಖಲಿಸುವ ಅವಕಾಶವಿದ್ದು, ಅದರ ಮೂಲಕ ನ್ಯಾಯಸಮ್ಮತ ಪರಿಹಾರವನ್ನು ಪಡೆಯಬಹುದು ಎಂದು ಸಚಿವರು ವಿವರಿಸಿದರು. ಗ್ರಾಹಕರ ಹಿತ ರಕ್ಷಣೆಗೆ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು.
ಇನ್ನು ಹೋಟೆಲ್‌ಗಳಲ್ಲಿ ಮಾರಾಟವಾಗುವ ಪ್ಯಾಕೆಟ್ ತಿಂಡಿ ತಿನಿಸುಗಳು ಮತ್ತು ನೀರಿನ ಬಾಟಲಿಗಳ ಮೇಲಿನ ಸರ್ಕಾರ ನಿಗದಿಪಡಿಸಿರುವ ಘೋಷಣೆಗಳು ಮತ್ತು ಮುದ್ರಣ ನಿಯಮಗಳ ಉಲ್ಲಂಘನೆ ಪ್ರಕರಣಗಳ ಕುರಿತು ಮಾತನಾಡಿದ ಅವರು, ಇಂತಹ ಉಲ್ಲಂಘನೆಗಳು ಕಂಡುಬಂದಲ್ಲಿ ಕಾನೂನು ಮಾಪನಶಾಸ್ತ್ರ (ಪೊಟ್ಟಣ ಸಾಮಗ್ರಿ) ನಿಯಮ–2011ರಡಿ ತಪಾಸಣೆ ನಡೆಸಲಾಗುತ್ತದೆ ಎಂದು ತಿಳಿಸಿದರು.
ನಿಯಮ ಉಲ್ಲಂಘಿಸಿದ ಹೋಟೆಲ್‌ಗಳ ಮೇಲೆ ನಿಯಮಾನುಸಾರ ಅಭಿಸಂಧಾನ ಶುಲ್ಕ (ಕಂಪೌಂಡಿಂಗ್ ಫೀ) ವಿಧಿಸಲಾಗುತ್ತದೆ. ಅಭಿಸಂಧಾನಕ್ಕೆ ಸಹಮತಿಸದ ಸಂಸ್ಥೆಗಳ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಮುನಿಯಪ್ಪ ಎಚ್ಚರಿಕೆ ನೀಡಿದರು.
ಗ್ರಾಹಕರು ಜಾಗೃತರಾಗಿದ್ದು, ಯಾವುದೇ ರೀತಿಯ ವಂಚನೆ ಕಂಡುಬಂದಲ್ಲಿ ಸಂಬಂಧಪಟ್ಟ ಗ್ರಾಹಕ ಆಯೋಗಗಳು ಹಾಗೂ ಇಲಾಖೆಗೆ ದೂರು ನೀಡುವಂತೆ ಸಚಿವರು ಮನವಿ ಮಾಡಿದ್ದಾರೆ.









