ಬೆಳಗಾವಿ: ಬೆಳಗಾವಿಯ ಸುವರ್ಣಸೌಧದಲ್ಲಿ ಇಂದು ವಿಧಾನಮಂಡಲದ ಚಳಿಗಾಲದ ಅಧಿವೇಶನ ಆರಂಭಗೊಂಡಿದೆ. ಅಧಿವೇಶನ ಆರಂಭವಾದ ತಕ್ಷಣ, ಇತ್ತೀಚೆಗೆ ನಿಧನರಾದ ಗಣ್ಯರಿಗೆ ವಿಧಿವಿಧಾನಪೂರ್ವಕ ಸಂತಾಪ ಸೂಚಿಸಿ, ಮೌನಾಚರಣೆ ನಡೆಸಲಾಯಿತು. ವಂದೇ ಮಾತರಂ ಗೀತೆಯಿಂದ ಆರಂಭಗೊಂಡಿದ್ದು, ನಂತರ ಸ್ಪೀಕರ್ ಯು.ಟಿ. ಖಾದರ್ ಸಂವಿಧಾನದ ಮಹತ್ವ ಹಾಗೂ ಪೀಠಿಕೆಯ ಅರ್ಥದ ಬಗ್ಗೆ ಸದಸ್ಯರಿಗೆ ಅಧ್ಯಯನಾತ್ಮಕವಾಗಿ ಬೋಧನೆ ನಡೆಸಿದರು.
ಪದ್ಮಶ್ರೀ ಪುರಸ್ಕೃತ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ. ದಿಗ್ಗಜ ಸಾಹಿತಿ ಎಸ್. ಎಲ್. ಭೈರಪ್ಪ. ಮಾಜಿ ಶಾಸಕರಾದ ಆರ್.ವಿ. ದೇವರಾಜ್. ಮಾಜಿ ಸಚಿವ ಎಚ್.ವೈ. ಮೇಟಿ. ಹಾಸ್ಯನಟ ಉಮೇಶ್ ಅವರು ಸೇರಿದಂತೆ ನಾಡಿನ ಗಣ್ಯರಿಗೆ ಸಂತಾಪ ಸೂಚಿಸಲಾಯಿತು
ಸದಸ್ಯರು ಗ್ರೀನ್ ಹಾಲ್‌ನಲ್ಲಿ ಇವರ ಸಾಧನೆಗಳನ್ನು ಸ್ಮರಿಸಿ, ರಾಜ್ಯದ ಸಾಂಸ್ಕೃತಿಕ, ಪರಿಸರ, ಸಾಹಿತ್ಯ ಹಾಗೂ ನಾಡು-ನಾಡಿನ ಸೇವೆಯಲ್ಲಿ ಇವರ ಪಾತ್ರವನ್ನು ಗೌರವಿಸಿದರು.
ವಿಧಾನಪರಿಷತ್‌ನಲ್ಲಿ ಸಹ ಕಲಾಪ ಅದೇ ರೀತಿಯ ಸಂತಾಪ ಸಭೆಯಿಂದ ಆರಂಭಗೊಂಡಿದ್ದು, ನಂತರ ವಿರೋಧ ಪಕ್ಷ ಹಾಗೂ ಆಡಳಿತ ಪಕ್ಷಗಳ ನಡುವೆ ಚಳಿಗಾಲದ ಅಧಿವೇಶನದಲ್ಲಿ ಎದುರಾಗುವ ಗಂಭೀರ ಚರ್ಚೆಗಳ ಸುಳಿವು ಸ್ಪಷ್ಟವಾಯಿತು. ವಿಪಕ್ಷ ನಾಯಕರು ವಿವಿಧ ವಿಚಾರಗಳಲ್ಲಿ ಸರ್ಕಾರವನ್ನು ಪ್ರಶ್ನಿಸಲು, ಜನಪರ ಸಮಸ್ಯೆಗಳನ್ನು ಮಂಡಿಸಲು ಪೂರ್ಣ ಸಜ್ಜಾಗಿದ್ದಾರೆ ಎಂದು ಹೇಳಲಾಗಿದೆ.
ಉತ್ತರ ಕರ್ನಾಟಕ – ಕಲ್ಯಾಣ ಕರ್ನಾಟಕ ಚರ್ಚೆಗಳಿಗೆ ವಿಶೇಷ ಮೀಸಲು: ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಮಾತನಾಡಿ, ಬುಧವಾರ ಮತ್ತು ಗುರುವಾರದ ಪೂರ್ತಿ ದಿನದ ಕಲಾಪವನ್ನು ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ಚರ್ಚೆಗೆ ಮೀಸಲಿಡಲಾಗಿದೆ ಎಂದಿದ್ದಾರೆ.





















