ಬೆಳಗಾವಿ: ಬೆಳಗಾವಿ ನಗರದ ನಾರ್ವೇಕರ ಗಲ್ಲಿಯಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ವೃದ್ಧೆಯೊಬ್ಬರು ಸಜೀವ ದಹನವಾಗಿರುವ ಘಟನೆ ಗುರುವಾರ ಸಂಭವಿಸಿದೆ.
ಮೃತ ವೃದ್ಧೆಯನ್ನು ಸುಪ್ರಿಯಾ ಬೈಲೂರು (78) ಎಂದು ಗುರುತಿಸಲಾಗಿದೆ. ಸುಪ್ರಿಯಾ ಬೈಲೂರು ಒಂಟಿಯಾಗಿ ಮನೆಯಲ್ಲಿ ವಾಸವಿದ್ದರು. ಅಡುಗೆ ಮಾಡುತ್ತಿದ್ದ ಸಂದರ್ಭದಲ್ಲಿ ಬೆಂಕಿ ತಗುಲಿರುವ ಅನುಮಾನ ವ್ಯಕ್ತವಾಗಿದೆ.
ಅಡುಗೆ ವೇಳೆ ಉಂಟಾದ ಬೆಂಕಿ ಬೆಡ್‌ಗೆ ತಗುಲಿ ಮನೆಯ ಇತರ ಭಾಗಗಳಿಗೂ ವ್ಯಾಪಿಸಿದೆ ಎನ್ನಲಾಗಿದೆ. ಘಟನೆ ನಡೆದ ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಖಡೇಬಜಾರ ಪೊಲೀಸ್ ಠಾಣಾ ಸಿಪಿಐ ಶ್ರೀಶೈಲ ಗಾಬಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಖಡೇಬಜಾರ ಪೊಲೀಸ್ ಠಾಣಾ ವಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಪರಿಶೀಲನೆ ನಡೆಸಲಾಗಿದೆ. ಬೆಂಕಿಯ ತೀವ್ರತೆಗೆ ಮನೆಯ ಪೀಠೋಪಕರಣಗಳು, ವಸ್ತುಗಳು ಹಾಗೂ ಅಡುಗೆ ಸಾಮಾಗ್ರಿಗಳು ಸಂಪೂರ್ಣ ಬೆಂಕಿಗಾಹುತಿಯಾಗಿವೆ.