ಕೊಟ್ಟ ಹಣ ಮರಳಿಸದ ಸ್ನೇಹಿತನನ್ನೇ ಕೊಚ್ಚಿದ ಕುಚಕು

0
24

ಬೆಳಗಾವಿ: 2,000 ರೂಪಾಯಿ ಸಾಲ ಸಾಲದ ಹಣ ಮರಳಿಸದ ಕೋಪದಿಂದ ಸ್ನೇಹಿತನನ್ನೇ ಕೊಚ್ಚಿ ಹತ್ಯೆಗೈದ ಕ್ರೂರ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗಿರಿಯಾಲ ಗ್ರಾಮದಲ್ಲಿ ನಡೆದಿದೆ.

ಕೊಲೆಯಾದ ದುರ್ದೈವಿ ಮಂಜುನಾಥ ಗೌಡರ (30) ಆಗಿದ್ದು, ಹತ್ಯೆಗೈದ ಆರೋಪಿ ದಯಾನಂದ ಗುಂಡೂರ ಆಗಿದ್ದಾನೆ. ಆತ ಕೊಲೆ ಮಾಡಿದ ನಂತರ ತಾನೇ ಪೊಲೀಸ್ ಠಾಣೆಗೆ ಬಂದು ಶರಣಾಗಿರುವುದು ಈ ಪ್ರಕರಣಕ್ಕೆ ಮತ್ತಷ್ಟು ಸಂಚಲನ ತಂದಿದೆ.

ಸಾಲದ ವಿವಾದವೇ ಹತ್ಯೆಗೆ ಕಾರಣ: ಮಂಜುನಾಥ ಗೌಡರ ಕಳೆದ ವಾರ ಸ್ನೇಹಿತ ದಯಾನಂದನಿಂದ ₹2,000 ಸಾಲ ಪಡೆದಿದ್ದರು. ಒಂದು ವಾರದೊಳಗೆ ಹಣ ವಾಪಸ್ ಕೊಡುತ್ತೇನೆ ಎಂದು ಹೇಳಿದ್ದರೂ, ಅವಧಿ ಮುಗಿದ ನಂತರ ಹಣ ಮರಳಿಸದ ಹಿನ್ನೆಲೆಯಲ್ಲಿ ಇಬ್ಬರ ಮಧ್ಯೆ ಭಾನುವಾರ ರಾತ್ರಿ ವಾಗ್ವಾದ ನಡೆದಿದೆ. ಅವಧಿ ಮುಗಿದ ಹಿನ್ನೆಲೆಯಲ್ಲಿ ಸಾಲ ಕೇಳಲು ದಯಾನಂದ ಮುಂದಾಗಿದ್ದ. ಇದೇ ಹಣದ ವಿಚಾರಕ್ಕೆ ಮಂಜುನಾಥ ‌ಹಾಗೂ ದಯಾನಂದ ಮಧ್ಯೆ ಜಗಳ ಆಗಿದೆ. ಇಬ್ಬರ ಜಗಳ ವಿಕೋಪಕ್ಕೆ ತಿರುಗಿ ಮಂಜುನಾಥ‌ನನ್ನು ದಯಾನಂದ ಕೊಲೆ ಮಾಡಿದ್ದಾನೆ.

ಬೆಳಗಿನ ಜಾವ ಕ್ರೌರ್ಯ: ಮಂಜುನಾಥ ಮತ್ತು ದಯಾನಂದ ಇಬ್ಬರೂ ಒಂದೇ ಹಳ್ಳಿಯವರಾಗಿದ್ದು, ಬೆಳಗಿನ ಜಾವ ದಯಾನಂದ ಸಿಟ್ಟಿನಲ್ಲೇ ಕೊಡ್ಲಿಯಿಂದ ಮಂಜುನಾಥನ ಮೇಲೆ ಹಲ್ಲೆ ನಡೆಸಿದ್ದಾನೆ. ತೀವ್ರ ರಕ್ತಸ್ರಾವಗೊಂಡ ಮಂಜುನಾಥನನ್ನು ತುರ್ತು ಚಿಕಿತ್ಸೆಗೆ ಆಸ್ಪತ್ರೆಗೆ ಕರೆದೊಯ್ಯುವ ಮುನ್ನವೇ ಆತ ಉಸಿರು ಬಿಟ್ಟಿದ್ದಾನೆ.

ಆರೋಪಿ ಶರಣಾಗಿದ್ದಾನೆ: ಘಟನೆಯ ಬಳಿಕ ಪಶ್ಚಾತ್ತಾಪಗೊಂಡ ದಯಾನಂದ ತಾನೇ ಬೈಲಹೊಂಗಲ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಪೊಲೀಸರು ಆತನನ್ನು ವಶಕ್ಕೆ ಪಡೆದು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ನ್ಯಾಯಾಂಗ ವಶಕ್ಕೆ ನೀಡಲಾಗಿದೆ.

ಅಲ್ಪ ಮೊತ್ತದ ಸಾಲದ ವಿಷಯಕ್ಕೆ ಇಬ್ಬರು ಸ್ನೇಹಿತರ ನಡುವೆ ಉಂಟಾದ ಈ ದಾರುಣ ಘಟನೆ ಗಿರಿಯಾಲ ಗ್ರಾಮದಲ್ಲಿ ಭಾರೀ ಆಘಾತ ಮೂಡಿಸಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Previous articleವರ್ಕ್ ಫ್ರಂ ಹೋಮ್ ಹೆಸರಲ್ಲಿ ಭಾರೀ ವಂಚನೆ
Next articleಪಕ್ಕದಲ್ಲೇ ಮಗಳು ಮಲಗಿದ್ದಳು, ಪತ್ನಿಯ ಉಸಿರು ನಿಲ್ಲಿಸಿದ ಪತಿ: ಆತ್ಮಹತ್ಯೆ ನಾಟಕ

LEAVE A REPLY

Please enter your comment!
Please enter your name here