Home Advertisement
Home ನಮ್ಮ ಜಿಲ್ಲೆ ಬೆಳಗಾವಿ ಅಕ್ರಮ ಗಣಿಗಾರಿಕೆ ತಡೆಗೆ ಮಹಿಳಾ ಅಧಿಕಾರಿಯ ಧೈರ್ಯ

ಅಕ್ರಮ ಗಣಿಗಾರಿಕೆ ತಡೆಗೆ ಮಹಿಳಾ ಅಧಿಕಾರಿಯ ಧೈರ್ಯ

0
5

ಬೆಳಗಾವಿ ಗ್ರಾಮೀಣದಲ್ಲಿ ಕಾನೂನು ಬಾಹಿರ ದಂಧೆಗೆ ಸವಾಲು: ಮಹಿಳಾ ಅಧಿಕಾರಿ ಧೈರ್ಯದಿಂದ ಎದುರಾಗಿ ನಿಂತ ಘಟನೆಯ ವಿಡಿಯೋ ವೈರಲ್

ಬೆಳಗಾವಿ: ಗಡಿನಾಡು ಬೆಳಗಾವಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕಾನೂನು ಬಾಹಿರವಾಗಿ ನಡೆಯುತ್ತಿದ್ದ ಗಣಿಗಾರಿಕೆ ದಂಧೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿ ಧೈರ್ಯದಿಂದ ಎದುರಾಗಿ ನಿಂತ ಘಟನೆ ಇದೀಗ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಈ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ಅಕ್ರಮ ಗಣಿಗಾರಿಕೆಯ ಹಿಂದೆ ಇರುವ ವ್ಯವಸ್ಥಿತ ಜಾಲದ ಬಗ್ಗೆ ಅನುಮಾನಗಳನ್ನು ಮೂಡಿಸಿದೆ.

ಗಣಿಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ಧಿಡೀರ್ ಭೇಟಿ ನೀಡಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಬಿಂದನ್ ಪಾಟೀಲ್, ಅಕ್ರಮ ಚಟುವಟಿಕೆಯನ್ನು ತಕ್ಷಣವೇ ನಿಲ್ಲಿಸುವಂತೆ ಸ್ಥಳದಲ್ಲಿದ್ದವರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು. ಆದರೆ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದವರು ಅಧಿಕಾರಿಯ ಸೂಚನೆಗೆ ಕಿವಿಗೊಡದೆ ನಿರ್ಲಕ್ಷ್ಯ ತೋರಿದ ಘಟನೆ ನಡೆದಿದೆ.

ಇದನ್ನೂ ಓದಿ: ತ್ರಿವಳಿ ಕೊಲೆ: ಮನೆಯ ಗುಂಡಿಯಲ್ಲಿ ತಂದೆ–ತಾಯಿ–ತಂಗಿಯ ಶವ ಪತ್ತೆ

ಈ ವೇಳೆ ಅಧಿಕಾರಿಯ ಕಾರ್ಯಾಚರಣೆಯನ್ನು ಅಲ್ಲಿದ್ದವರು ವಿಡಿಯೋ ಮಾಡಲಾರಂಭಿಸಿದಾಗ, ಬಿಂದನ್ ಪಾಟೀಲ್ ಕಾನೂನು ಬಾಹಿರ ಗಣಿಗಾರಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದ ಜೆಸಿಬಿ ಯಂತ್ರವನ್ನು ನಿಲ್ಲಿಸಲು ನೇರವಾಗಿ ಕಲ್ಲು ಎಸೆಯುವ ಮೂಲಕ ಕಾರ್ಯಾಚರಣೆಗೆ ಅಡ್ಡಿಯಾಗುವ ಪ್ರಯತ್ನವನ್ನು ತಡೆದಿದ್ದಾರೆ. ಅಧಿಕಾರಿಯ ಈ ಧೈರ್ಯದ ನಡೆ ಸ್ಥಳದಲ್ಲಿದ್ದವರನ್ನು ಕ್ಷಣಕಾಲ ಗೊಂದಲಕ್ಕೆ ದೂಡಿತು.

ಘಟನೆಯ ವೇಳೆ ಸಂಬಂಧಪಟ್ಟ ಮೇಲಾಧಿಕಾರಿಗಳು ಅಥವಾ ಜವಾಬ್ದಾರ ವ್ಯಕ್ತಿಗಳನ್ನು ತಕ್ಷಣ ಸ್ಥಳಕ್ಕೆ ಕರೆಸುವಂತೆ ಬಿಂದನ್ ಪಾಟೀಲ್ ಸೂಚಿಸಿದರೂ, ಅಲ್ಲಿದ್ದವರು ಆ ಸೂಚನೆಯನ್ನು ಪಾಲಿಸಲಿಲ್ಲ. ಅಲ್ಲದೆ, “ಈ ಅಕ್ರಮ ಗಣಿಗಾರಿಕೆಗೆ ಯಾರು ಸೂಚನೆ ನೀಡಿದ್ದಾರೆ?” ಎಂದು ಅಧಿಕಾರಿಯವರು ಪ್ರಶ್ನಿಸಿದಾಗ, ಒಬ್ಬ ವ್ಯಕ್ತಿಯ ಹೆಸರನ್ನು ಪ್ರಸ್ತಾಪಿಸಲಾಯಿತು. ಆದರೆ ಆ ವ್ಯಕ್ತಿಯನ್ನು ಸ್ಥಳಕ್ಕೆ ಕರೆಸದೇ, ಅಲ್ಲಿದ್ದವರು ಮೌನಕ್ಕೆ ಶರಣಾದರು ಎನ್ನಲಾಗಿದೆ.

ಇದನ್ನೂ ಓದಿ: ಬೀದರ್‌: ನಿಗೂಢ ವಸ್ತು ಸ್ಪೋಟ – ಮಕ್ಕಳು ಸೇರಿ 6 ಜನರಿಗೆ ಗಾಯ

ಈ ಘಟನೆಯ ವಿಡಿಯೋ ವೈರಲ್ ಆದ ಬಳಿಕ ಪ್ರತಿಕ್ರಿಯೆ ನೀಡಿದ ಬಿಂದನ್ ಪಾಟೀಲ್, “ವೈರಲ್ ಆಗಿರುವ ವಿಡಿಯೋ ಹಳೆಯದು. ಇದು ಇತ್ತೀಚಿನ ಘಟನೆಯಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ಆದರೂ ಕೂಡ, ಅಕ್ರಮ ಗಣಿಗಾರಿಕೆ ವಿರುದ್ಧ ಇಲಾಖೆ ಅಧಿಕಾರಿಯೊಬ್ಬರು ತೋರಿದ ಧೈರ್ಯ ಮತ್ತು ನಿಲುವು ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

ಇದಕ್ಕೆ ಜೊತೆಗೆ, ಬೆಳಗಾವಿ ಭಾಗದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ದಂಧೆಗೆ ರಾಜಕೀಯ ಅಥವಾ ಆಡಳಿತಾತ್ಮಕ ರಕ್ಷಣೆ ಇದೆಯೇ?, ಅಧಿಕಾರಿಗಳ ಸೂಚನೆಗಳನ್ನು ನಿರ್ಲಕ್ಷ್ಯ ಮಾಡುವ ಧೈರ್ಯ ಅಕ್ರಮ ಗಣಿಗಾರರಿಗೆ ಹೇಗೆ ಬರುತ್ತದೆ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಗಂಭೀರವಾಗಿ ಚರ್ಚೆಯಾಗುತ್ತಿವೆ. ಈ ಪ್ರಕರಣವು ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ತಡೆಗೆ ಇರುವ ಸವಾಲುಗಳನ್ನು ಮತ್ತೊಮ್ಮೆ ಬಯಲಿಗೆ ತಂದಿದೆ.

Previous articleಉಳವಿ ಜಾತ್ರೆ: ಪೋಲಿಸ್ ಇಲಾಖೆಯ ವಿಶೇಷ ಬಂದೋಬಸ್ತ
Next articleಉದ್ಯಮಿ ಸಿ.ಜೆ.ರಾಯ್‌ ಆತ್ಮಹತ್ಯೆ ಪ್ರಕರಣ ತನಿಖೆಗೆ SIT ರಚನೆ