Home Advertisement
Home ನಮ್ಮ ಜಿಲ್ಲೆ ಬೆಳಗಾವಿ ಬೆಳಗಾವಿ: ಹೂವಿನ ಮಾರುಕಟ್ಟೆ ವಿವಾದ – ಕೇಂದ್ರ ಸಚಿವರಿಗೆ ಶೆಟ್ಟರ್ ಪತ್ರ

ಬೆಳಗಾವಿ: ಹೂವಿನ ಮಾರುಕಟ್ಟೆ ವಿವಾದ – ಕೇಂದ್ರ ಸಚಿವರಿಗೆ ಶೆಟ್ಟರ್ ಪತ್ರ

0
54

ಬೆಳಗಾವಿ: ಬೆಳಗಾವಿ ದಂಡು ಮಂಡಳಿ ವ್ಯಾಪ್ತಿಯ ಭರತೇಶ ಶಿಕ್ಷಣ ಸಂಸ್ಥೆಯ ಸಮೀಪ ಯಾವುದೇ ಕಾನೂನುಬದ್ಧ ಅನುಮತಿ ಇಲ್ಲದೆ ಖಾಸಗಿ ಸಗಟು ಹೂವಿನ ಮಾರುಕಟ್ಟೆ ಆರಂಭಕ್ಕೆ ಅವಕಾಶ ನೀಡಿರುವ ವಿಚಾರವನ್ನು ಖಂಡಿಸಿ, ಬೆಳಗಾವಿ ಲೋಕಸಭಾ ಕ್ಷೇತ್ರದ ಸಂಸದ ಜಗದೀಶ್ ಶೆಟ್ಟರ್ ಅವರು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದು ಗಮನಕ್ಕೆ ತಂದಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಶೆಟ್ಟರ್ ಅವರು, ಹೂವಿನ ಸಗಟು ಮಾರುಕಟ್ಟೆ ಆರಂಭಕ್ಕೆ ದಂಡು ಮಂಡಳಿ ಪೂರ್ವದಲ್ಲಿ ಬೆಳಗಾವಿ ಕೃಷಿ ಉತ್ಪನ್ನ ಮಾರುಕಟ್ಟೆ ಹಾಗೂ ತೋಟಗಾರಿಕೆ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ತಿಳಿಸಿದ್ದಾರೆ. ಆದರೆ, ಯಾವುದೇ ಅಧಿಕೃತ ಅನುಮತಿ ಇಲ್ಲದೆ ಎರಡನೇ ಮಾರುಕಟ್ಟೆ ಆರಂಭಕ್ಕೆ ಒಪ್ಪಿಗೆ ನೀಡಿರುವುದು ಕಾನೂನುಬದ್ಧವಲ್ಲದ ನಿರ್ಧಾರವಾಗಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಸುವರ್ಣ ಯುಗದ ಸುದ್ದಿ ವಾಚಕಿ ಸರಳಾ ಮಹೇಶ್ವರಿ ಇನ್ನಿಲ್ಲ

ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಮಾರುಕಟ್ಟೆ: ಬೆಳಗಾವಿಯ ಅಶೋಕನಗರದಲ್ಲಿ ಈಗಾಗಲೇ ಹೂವಿನ ಮಾರುಕಟ್ಟೆ ಕಾರ್ಯನಿರ್ವಹಿಸುತ್ತಿದ್ದು, ಅದರ ಜೊತೆಗೆ ಮತ್ತೊಂದು ಸಗಟು ಮಾರುಕಟ್ಟೆ ಆರಂಭಕ್ಕೆ ಅವಕಾಶ ನೀಡಿರುವುದು ಅನಗತ್ಯ ಮತ್ತು ಕಾನೂನುಬಾಹಿರವಾಗಿದೆ ಎಂದು ಶೆಟ್ಟರ್ ತಿಳಿಸಿದ್ದಾರೆ.

ಈ ಬಗ್ಗೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಗಳು ಸಹ ದಂಡು ಮಂಡಳಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರ ಬರೆದು, ನೂತನ ಪ್ರದೇಶದಲ್ಲಿ ನಡೆಯುತ್ತಿರುವ ಹೂವಿನ ವ್ಯಾಪಾರವನ್ನು ತಕ್ಷಣ ಸ್ಥಗಿತಗೊಳಿಸುವಂತೆ ಸೂಚನೆ ನೀಡಿದ್ದಾರೆ. ಆದರೆ, ಅಧಿಕಾರಿಗಳು ಇದುವರೆಗೆ ಸೂಕ್ತ ಕ್ರಮ ಕೈಗೊಳ್ಳದಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಜಿಪಂ CEO ಕಾರ್ ಜಪ್ತಿಗೆ ಮುಂದಾದ ನ್ಯಾಯಾಲಯದ ಸಿಬ್ಬಂದಿ

ಸಭೆಗೆ ಆಹ್ವಾನ ನೀಡದಿರುವ ಬಗ್ಗೆ ಅಸಮಾಧಾನ: ದಂಡು ಮಂಡಳಿಯ ಮಾಸಿಕ ಸಭೆಗಳಿಗೆ ಲೋಕಸಭಾ ಸದಸ್ಯರು ವಿಶೇಷ ಆಹ್ವಾನಿತರಾಗಿರುತ್ತಾರೆ. ಆದರೆ, ಇಂತಹ ಮಹತ್ವದ ನಿರ್ಧಾರ ಕೈಗೊಳ್ಳುವ ಸಂದರ್ಭದಲ್ಲಿ ತಮ್ಮನ್ನು ಸಭೆಗೆ ಆಹ್ವಾನಿಸದೇ ನಿರ್ಧಾರ ತೆಗೆದುಕೊಂಡಿರುವುದು ಅತ್ಯಂತ ವಿಷಾದಕರ ಸಂಗತಿ ಎಂದು ಶೆಟ್ಟರ್ ಬೇಸರ ವ್ಯಕ್ತಪಡಿಸಿದ್ದಾರೆ. ದಂಡು ಮಂಡಳಿ ಪ್ರದೇಶವು ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಒಳಪಟ್ಟಿದ್ದರೂ ಸಹ, ಈ ವಿಷಯವನ್ನು ತಮ್ಮ ಗಮನಕ್ಕೆ ತರದೆ ಸಭೆಯಲ್ಲಿ ಠರಾವು ಪಾಸು ಮಾಡಿರುವುದು ಅಸಮರ್ಪಕ ಕ್ರಮವಾಗಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ತಕ್ಷಣ ಕ್ರಮಕ್ಕೆ ಆಗ್ರಹ: ಈ ಕಾನೂನುಬಾಹಿರ ಸಗಟು ಹೂವಿನ ಮಾರುಕಟ್ಟೆಯಲ್ಲಿನ ವ್ಯಾಪಾರವನ್ನು ಕೂಡಲೇ ಸ್ಥಗಿತಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಶೆಟ್ಟರ್ ಮನವಿ ಮಾಡಿದ್ದಾರೆ. ಜೊತೆಗೆ, ಈ ಕುರಿತು ದಂಡು ಮಂಡಳಿ ರಕ್ಷಣಾ ಎಸ್ಟೇಟ್ ಅಧಿಕಾರಿ, ಪುಣೆ ಇವರಿಗೂ ಪತ್ರ ಕಳುಹಿಸಲಾಗಿದೆ.

ಇದನ್ನೂ ಓದಿ: JDS ಜಿಲ್ಲಾಧ್ಯಕ್ಷರ ಆಯ್ಕೆ ವಿವಾದ: ಸಾಮೂಹಿಕ ರಾಜೀನಾಮೆಯ ಎಚ್ಚರಿಕೆ

ಚರ್ಚೆಗೆ ಸಭೆ ಆಯೋಜನೆಗೆ ಸೂಚನೆ: ಈ ವಿಷಯವನ್ನು ಸುಧೀರ್ಘವಾಗಿ ಚರ್ಚಿಸಲು ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಇಲಾಖಾ ಅಧಿಕಾರಿಗಳೊಂದಿಗೆ ಸಭೆ ಆಯೋಜಿಸುವಂತೆ ದಂಡು ಮಂಡಳಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಶೆಟ್ಟರ್ ಪತ್ರದ ಮೂಲಕ ಸೂಚಿಸಿದ್ದಾರೆ.

ಕಾನೂನುಬದ್ಧತೆ, ರೈತರ ಹಿತ, ವ್ಯಾಪಾರಿಗಳ ಭದ್ರತೆ ಹಾಗೂ ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ವಿಚಾರವನ್ನು ತ್ವರಿತವಾಗಿ ಬಗೆಹರಿಸುವ ಅಗತ್ಯವಿದೆ ಎಂದು ಅವರು ಒತ್ತಾಯಿಸಿದ್ದಾರೆ.

Previous articleಗುಕೇಶ್ ಸಾಧನೆಗೆ ಟೈಟಾನ್ ಸನ್ಮಾನ: ವಿಶೇಷ ಗಡಿಯಾರ ಬಿಡುಗಡೆ
Next articleಲಾಡ್ಲೆ ಮಶಾಕ್ ದರ್ಗಾದ ಶಿವಲಿಂಗ ಪೂಜೆಗೆ ಸುಪ್ರೀಂ ಗ್ರೀನ್ ಸಿಗ್ನಲ್