ಒಂದು ಕೋಟಿ ಬೇಡಿಕೆ ಇಟ್ಟ ನಕಲಿ ಯೂಟ್ಯೂಬರ್ಸ್ ಜಾಲ ಬಹಿರಂಗ, ಮೂವರ ಬಂಧನ
ಬೆಳಗಾವಿ: ಸರ್ಕಾರಿ ಮಹಿಳಾ ಅಧಿಕಾರಿಯ ಮನೆಯೊಳಗೆ ರಹಸ್ಯ ಕ್ಯಾಮರಾ ಅಳವಡಿಸಿ ಖಾಸಗಿ ಕ್ಷಣಗಳನ್ನು ಚಿತ್ರೀಕರಿಸಿ, ಅವುಗಳನ್ನು ಬಹಿರಂಗಪಡಿಸುವ ಬೆದರಿಕೆ ಹಾಕಿ ಕೋಟಿ ರೂಪಾಯಿಗಳ ಬ್ಲ್ಯಾಕ್‌ಮೇಲ್ ನಡೆಸುತ್ತಿದ್ದ ನಕಲಿ ಯೂಟೂಬರ್ಸ್‌ಗಳ ಜಾಲ ಬೆಳಗಾವಿಯಲ್ಲಿ ಬಹಿರಂಗವಾಗಿದೆ. ಈ ಸಂಬಂಧ ಮಾಳಮಾರುತಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ನಗರವನ್ನೇ ಬೆಚ್ಚಿಬೀಳಿಸುವಂತಹ ವಿಕೃತ ಕೃತ್ಯ ಬೆಳಕಿಗೆ ಬಂದಿದೆ.
ಬಂಧಿತರನ್ನು ಸಮೀರ್ ನಿಸಾರ್ ಅಹ್ಮದ್ ಶೇಖ್ (32), ಅಬ್ದುಲ್ ರಶೀದ್ ಮಕಾನದಾರ (51) ಹಾಗೂ ಮೊಹಮ್ಮದ್ ಬಾಳೇಕುಂದ್ರಿ ಎಂದು ಗುರುತಿಸಲಾಗಿದೆ. ಪತ್ರಕರ್ತರಂತೆ ವರ್ತಿಸುತ್ತಾ, ಯೂಟ್ಯೂಬ್ ಹಾಗೂ ಸಾಮಾಜಿಕ ಜಾಲತಾಣಗಳನ್ನು ಮುಂಬಡಿಗೆಯಾಗಿ ಬಳಸಿಕೊಂಡು ಬ್ಲ್ಯಾಕ್‌ಮೇಲ್ ದಂಧೆ ನಡೆಸುತ್ತಿದ್ದ ಇವರು, ಮಹಿಳಾ ಅಧಿಕಾರಿಯ ಮನೆಯ ಕೊಠಡಿಯಲ್ಲಿ ಗುಪ್ತವಾಗಿ ಹಿಡನ್ ಕ್ಯಾಮರಾ ಅಳವಡಿಸಿ ಖಾಸಗಿ ವಿಡಿಯೋಗಳನ್ನು ಸೆರೆ ಹಿಡಿದಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.
ಇದನ್ನೂ ಓದಿ: ಮೈಸೂರು: ಅಧಿಕಾರಿಗಳ ಮನೆ ಸೇರಿದಂತೆ ಏಳು ಕಡೆ ಲೋಕಾ ದಾಳಿ
ಒಂದು ಕೋಟಿ ಬೇಡಿಕೆ, 50 ಲಕ್ಷಕ್ಕೆ ನಿರಂತರ ಪೀಡನೆ: ಆರೋಪಿಗಳು ಸೆರೆಹಿಡಿದ ಖಾಸಗಿ ವಿಡಿಯೋಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿ, ಮಹಿಳಾ ಅಧಿಕಾರಿಯಿಂದ ಬರೋಬ್ಬರಿ ಒಂದು ಕೋಟಿ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಬಳಿಕ ತಾತ್ಕಾಲಿಕವಾಗಿ 50 ಲಕ್ಷ ರೂ. ನೀಡುವಂತೆ ನಿರಂತರವಾಗಿ ಒತ್ತಡ ಹೇರುತ್ತಿದ್ದರು ಎನ್ನಲಾಗಿದೆ. ಪ್ರಕರಣ ದಾಖಲಿಸದಂತೆ ಪೊಲೀಸ್ ಅಧಿಕಾರಿಗಳ ಮೇಲೂ ಪರೋಕ್ಷವಾಗಿ ಒತ್ತಡ ತರುವ ಪ್ರಯತ್ನ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಮಾಳಮಾರುತಿ ಪೊಲೀಸರ ಖಡಕ್ ಕಾರ್ಯಾಚರಣೆ: ಮಹಿಳಾ ಅಧಿಕಾರಿ ನೀಡಿದ ದೂರಿನ ಮೇರೆಗೆ, ಸಿಪಿಐ ಬಿ.ಆರ್. ಗಡ್ಡೇಕರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಮಾಳಮಾರುತಿ ಪೊಲೀಸರು, ಆರೋಪಿಗಳ ಚಟುವಟಿಕೆಗಳ ಮೇಲೆ ನಿಗಾ ವಹಿಸಿ, ಸೂಕ್ತ ಸಾಕ್ಷ್ಯ ಸಂಗ್ರಹಿಸಿ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯಾವುದೇ ಒತ್ತಡಕ್ಕೆ ಮಣಿಯದೆ ಪ್ರಕರಣವನ್ನು ಗಂಭೀರವಾಗಿ ಕೈಗೊಂಡ ಪೊಲೀಸ್ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ: ಮೈಸೂರು — ಸಿಗರೇಟ್ ಫೋಟೋಶೂಟ್ ವಿವಾದ: ಮತ್ತೆ ಸಂಕಷ್ಟದಲ್ಲಿ ಬಿಗ್ ಬಾಸ್ ಸ್ಪರ್ಧಿ ರಜತ್
ಆರೋಪಿಗಳಿಂದ ಮೊಬೈಲ್ ಫೋನ್‌ಗಳು, ಡಿಜಿಟಲ್ ಸಾಧನಗಳು, ಸಂಗ್ರಹಿತ ವಿಡಿಯೋಗಳು ಹಾಗೂ ಇತರೆ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ತಾಂತ್ರಿಕ ತಜ್ಞರ ಸಹಾಯದಿಂದ ಪರಿಶೀಲನೆ ನಡೆಯುತ್ತಿದೆ.
ದೊಡ್ಡ ಜಾಲದ ಶಂಕೆ, ವ್ಯಾಪಕ ತನಿಖೆ: ಈ ಪ್ರಕರಣದ ಹಿಂದೆ ಇನ್ನಷ್ಟು ಜನರು ಮತ್ತು ದೊಡ್ಡ ಬ್ಲ್ಯಾಕ್‌ಮೇಲ್ ಜಾಲ ಇರಬಹುದೆಂಬ ಶಂಕೆ ವ್ಯಕ್ತಪಡಿಸಿರುವ ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ, “ಎಲ್ಲಾ ಆಯಾಮಗಳಿಂದ ತನಿಖೆ ನಡೆಸಲಾಗುವುದು. ಆರೋಪಿಗಳ ಸಂಪರ್ಕ, ಹಿಂದಿನ ಪ್ರಕರಣಗಳು ಹಾಗೂ ಡಿಜಿಟಲ್ ಸಾಕ್ಷ್ಯಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತದೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: NH-50ರಲ್ಲಿನ ಕಾರ್ ಸರ್ವೀಸ್ ಸೆಂಟರ್‌ನಲ್ಲಿ ಭಾರೀ ಅಗ್ನಿ ಅವಘಡ
ಯೂಟ್ಯೂಬ್ ಮತ್ತು ಸಾಮಾಜಿಕ ಜಾಲತಾಣಗಳ ಹೆಸರಿನಲ್ಲಿ ನಡೆಯುತ್ತಿರುವ ನಕಲಿ ಮಾಧ್ಯಮಗಿರಿತನಕ್ಕೆ ಈ ಪ್ರಕರಣ ಗಂಭೀರ ಎಚ್ಚರಿಕೆಯಾಗಿ ಪರಿಣಮಿಸಿದ್ದು, ಸಾರ್ವಜನಿಕರಲ್ಲಿ ಜಾಗೃತಿಯ ಅಗತ್ಯವಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.























