ಬೆಳಗಾವಿ: ಹಿಂದುಳಿದ ವರ್ಗಗಳ ಆಯೋಗದ ಶೈಕ್ಷಣಿಕ ಮತ್ತು ಸಾಮಾಜಿಕ ಗಣತಿ ಕಾರ್ಯ ರಾಜ್ಯದ ಎಲ್ಲೆಡೆ ಜೋರಾಗಿ ನಡೆಯುತ್ತಿದ್ದರೂ, ಬೆಳಗಾವಿಯಲ್ಲಿ ಮಾತ್ರ ಗೊಂದಲದ ಗೂಡಾಗಿದೆ. ಇದಕ್ಕೆ ಕಾರಣವೆಂದರೆ ಬೆಳಗಾವಿ ತಹಶೀಲ್ದಾರ್ ಕಚೇರಿಯ ಯಡವಟ್ಟು.!
ಹೀಗಾಗಿ ಶಿಕ್ಷಕರೇ ಗಣತಿಗೆ ವಿರೋಧದ ಧ್ವನಿ ಎತ್ತುವ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿದೆ. ಸತ್ತವರಿಗೂ ಕರ್ತವ್ಯ ಕೊಟ್ಟಿದ್ದಾರೆ, ನಿವೃತ್ತರನ್ನು ಗಣತಿ ಕಾರ್ಯಕ್ಕೆ ನೇಮಿಸಿದ್ದಾರೆ ಎಂಬ ಸಂಗತಿ ಬಯಲಾಗುತ್ತಿದ್ದಂತೆ, ಜಿಲ್ಲೆಯಲ್ಲೇ ಗಣತಿ ಪ್ರಕ್ರಿಯೆಯ ವಿಶ್ವಾಸಾರ್ಹತೆಯೇ ಪ್ರಶ್ನೆಗೆ ಒಳಗಾಗಿದೆ.
ಬೆಳಗಾವಿ ತಹಶೀಲ್ದಾರರು ಸತ್ತವರನ್ನು ಜೀವಂತವೆಂದು ಪಟ್ಟಿ ಮಾಡಿ ನೇಮಕದ ಆದೇಶ ನೀಡಿದ್ದಾರೆ. ನಿವೃತ್ತರಾದವರ ಹೆಸರನ್ನೂ ಗಣತಿ ಕರ್ತವ್ಯ ಪಟ್ಟಿಯಲ್ಲಿ ಸೇರಿಸಲಾಗಿದೆ. ಅನಾರೋಗ್ಯದಿಂದ ಬಳಲುತ್ತಿರುವ ಶಿಕ್ಷಕರು, ಗರ್ಭಿಣಿಯರು ಕೂಡ ಈ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ. ಶಿಕ್ಷಕರನ್ನು ತಮ್ಮ ಶಾಲಾ ವ್ಯಾಪ್ತಿಯಿಂದ ದೂರದ ಪ್ರದೇಶಗಳಿಗೆ ಕಳುಹಿಸಲಾಗಿದೆ ಎಂದು ದೂರಲಾಗಿದೆ.
ಶಿಕ್ಷಕರ ಆಕ್ರೋಶ: ತಹಶೀಲ್ದಾರರ ಈ ನಿರ್ಲಕ್ಷ, ನೇಮಕಾತಿಯಿಂದ ಬೇಸತ್ತ ಶಿಕ್ಷಕರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಮೆಟ್ಟಿಲು ಹತ್ತಿ ಆಕ್ರೋಶ ವ್ಯಕ್ತಪಡಿಸಿದರು. ನಾವು ಸ್ವತಃ ಪ್ರದೇಶವಾರು ಶಿಕ್ಷಕರ ಪಟ್ಟಿಯನ್ನು ಸಿದ್ಧಪಡಿಸಿ ಕೊಟ್ಟಿದ್ದರೂ, ತಹಶೀಲ್ದಾರರು ಬೇಕಾಬಿಟ್ಟಿ ಆದೇಶ ಮಾಡಿ ಗೊಂದಲ ಸೃಷ್ಟಿಸಿದ್ದಾರೆ ಎಂದು ಶಿಕ್ಷಕರ ಸಂಘದವರು ಆರೋಪಿಸಿದರು.
ಅಧಿಕಾರಿಗಳ ಪ್ರತಿಕ್ರಿಯೆ: ಶಿಕ್ಷಕರ ಸಂಘದ ಪ್ರತಿನಿಧಿಗಳು ಅಪರ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ತಮಗೆ ಆಗಿರುವ ಅನ್ಯಾಯ ತಕ್ಷಣ ಸರಿಪಡಿಸಬೇಕೆಂದು ಮನವಿ ಸಲ್ಲಿಸಿದರು. ಆದರೆ ತಹಶೀಲ್ದಾರರನ್ನು ಸಂಪರ್ಕಿಸಲು ಮಾಡಿದ ಪ್ರಯತ್ನವೂ ಫಲಪ್ರದವಾಗದೆ ಹೋಗಿದೆ. ಅಪರ ಜಿಲ್ಲಾಧಿಕಾರಿ ಮಾತ್ರ ಗಣತಿ ಕಾರ್ಯಕ್ಕೆ ಅಡ್ಡಿ ತರುವಂತಿಲ್ಲ, ಸಹಕರಿಸಬೇಕು ಎಂದು ಮನವಿ ಮಾಡಿದರೂ ಸಮಸ್ಯೆ ಬಗೆಹರಿದಿಲ್ಲ.