ಬೆಳಗಾವಿ: ಬೆಳಗಾವಿ ಜಿಲ್ಲೆಯ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ರಾಜಕೀಯ ವೈಷಮ್ಯ ಅತಿರೇಕಕ್ಕೆ ತಲುಪಿದೆ. ಕಿತ್ತೂರಿನ ಪಿಕೆಪಿಎಸ್ ಚುನಾವಣಾ ಸ್ಥಳದಲ್ಲಿ ಕಾಂಗ್ರೆಸ್–ಬಿಜೆಪಿ ಬೆಂಬಲಿಗರು ಪರಸ್ಪರ ಘರ್ಷಣೆಗಿಳಿದು ಗದ್ದಲ ಗಲಾಟೆ ನಡೆಸಿದ್ದಾರೆ.
ಕಿತ್ತೂರು ಪಿಕೆಪುಎಸ್ ಸೆಕ್ರೆಟರಿ ಭೀಮಪ್ಪನ ಮೇಲೆ ಕಾಂಗ್ರೆಸ್ ಬೆಂಬಲಿತ ಕಾರ್ಯಕರ್ತರು ಹಲ್ಲೆ ನಡೆಸಿದ್ದು, ನಂತರ ಅವನನ್ನು ಕಿಡ್ನಾಪ್ ಮಾಡುವ ಯತ್ನ ಕೂಡ ನಡೆದಿದೆ ಎನ್ನಲಾಗಿದೆ. ಈ ಘಟನೆ ಪೊಲೀಸ್ ಠಾಣೆ ಮುಂಭಾಗದಲ್ಲೇ ನಡೆದಿರುವುದು ಗಂಭೀರ ಚರ್ಚೆಗೆ ಗ್ರಾಸವಾಗಿದೆ.
ಇದಾದ ಬಳಿಕ ಕಾಂಗ್ರೆಸ್–ಬಿಜೆಪಿ ಕಾರ್ಯಕರ್ತರ ನಡುವೆ ಕಿತ್ತೂರಿನಲ್ಲೇ ತೀವ್ರ ಹೋರಾಟ ಉಂಟಾಗಿದೆ. ಎರಡೂ ಪಕ್ಷಗಳ ಬೆಂಬಲಿಗರು ಪರಸ್ಪರ ದಾಳಿ ನಡೆಸಿದ ಪರಿಣಾಮ ಅಶಾಂತಿ ಸೃಷ್ಟಿಯಾಗಿದೆ.ಡಿಸಿಸಿ ಬ್ಯಾಂಕ್ ನಿರ್ದೇಶಕರ ಆಯ್ಕೆಗೆ ಪಿಕೆಪಿಎಸ್‌ನ ಒಬ್ಬ ಸದಸ್ಯನಿಗೆ ಮತದಾನ ಹಕ್ಕು ನೀಡುವ ಕುರಿತು ಇಂದು ನಡೆದಿರುವ ಸಭೆಯಲ್ಲಿ ಈ ಗಲಾಟೆ ಪ್ರಾರಂಭವಾಯಿತು.
ಕಾಂಗ್ರೆಸ್ ಬೆಂಬಲಿತ ಸದಸ್ಯರ ಸಂಖ್ಯೆ ಕಡಿಮೆ ಇರುವ ಹಿನ್ನೆಲೆಯಲ್ಲಿ, ಚುನಾವಣೆಯನ್ನು ಮುಂದೂಡಿಸಲು ಸೆಕ್ರೆಟರಿಯನ್ನು ಅಪಹರಿಸುವ ಪ್ಲ್ಯಾನ್ ಕೈಗೊಂಡಿದ್ದರು ಎಂಬ ಆರೋಪ ಕೇಳಿ ಬಂದಿದೆ. ಇದಕ್ಕೆ ಬಿಜೆಪಿ ಬೆಂಬಲಿಗರು ವಿರೋಧ ತೋರಿದ ಹಿನ್ನೆಲೆಯಲ್ಲಿ ಗಲಾಟೆ ಉಂಟಾಗಿದೆ.
ಚುನಾವಣೆ ದಿನ ಹೆಚ್ಚುವರಿ ಪೊಲೀಸ್ ಪಡೆ ನಿಯೋಜನೆ ಮಾಡದೇ ಕಿತ್ತೂರು ಪೊಲೀಸರು ನಿರ್ಲಕ್ಷ್ಯ ತೋರಿರುವುದಕ್ಕೆ ಜನರಿಂದ ತೀವ್ರ ಟೀಕೆ ವ್ಯಕ್ತವಾಗಿದೆ. ಚುನಾವಣೆ ಬಿಸಿ ರಾಜಕೀಯ ಕದನಕ್ಕೆ ತಿರುಗಿದ್ದು, ಮುಂದಿನ ಹಂತದಲ್ಲಿ ಹೀಗೇ ಅಶಾಂತಿ ಮುಂದುವರಿಯುತ್ತದೆಯೇ ಎಂಬ ಆತಂಕ ಪ್ರದೇಶದಲ್ಲಿ ಮನೆ ಮಾಡಿದೆ.